ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಪ್ರಾರಂಭ
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡಿನ ಉತ್ಸವ ಏ.6 ರಂದು ಶನಿವಾರ ಪ್ರಾರಂಭಗೊಳ್ಳಲಿದೆ.
ದೇವಳದ ತಂತ್ರಿಗಳಾದ ಸುಭ್ರಹ್ಮಣ್ಯ ತಂತ್ರಿ ಹಾಗೂ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ರಾಮ್ ಭಟ್, ಪರಮೇಶ್ವರ ಭಟ್, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಯು. ತಾರನಾಥ ಅಳ್ವ, ಚೇರಾ ಸೂರ್ಯ ನಾರಾಯಣ ರಾವ್, ಅಮ್ಮುಂಜೆಗುತ್ತಿನವರು, ಉಳಿಪಾಡಿಗುತ್ತಿನವರು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ದೇವಳದ ಪ್ರಮುಖರಾದ ಊರಿನ ಭಕ್ತಾಧಿಗಳು ದೇವಿಯಲ್ಲಿ ಪ್ರಾರ್ಥಿಸುತ್ತಾರೆ.
ಮೂಡಬಿದ್ರೆ ಚೌಟರ ಸೀಮೆಯ ಪದ್ಮನಾಭ ಚಮಗಾರ ತಯಾರಿಸಿಕೊಟ್ಟ ಸುಮಾರು ೧೮ ಕೆ.ಜಿ ಭಾರದ ಬ್ರಹದ್ದಾಕರದ ಚೆಂಡನ್ನು ಕೊಂಬು ಬ್ಯಾಂಡ್ ವಾಲಗದೊಂದಿಗೆ ಮೆರವಣಿಗೆಯಲ್ಲಿ ಪವಿತ್ರವಾದ ಚೆಂಡಿನ ಗದ್ದೆಗೆ ತರಲಾಗುವುದು.
ಗದ್ದೆಯ ಉತ್ತರ ದಿಕ್ಕಿನ ಸುಲ್ತಾನ್ ಕಟ್ಟೆಯ ಬಳಿ ನಿಂತ ಅಮ್ಮುಂಜೆ ಹಾಗೂ ಉಳಿಪಾಡಿಗುತ್ತಿನವರನ್ನು ಸ್ವಾಗತಿಸಿ ಚೆಂಡಿನ ಗದ್ದೆಯ ಮಧ್ಯ ಭಾಗಕ್ಕೆ ಕರೆದುಕೊಂಡು ಬಂದು ಮಟ್ಟಿ ಜೋಗಿ ಮನೆತನದವರು ಚೆಂಡಿನ ಆಟ ಶುರುಮಾಡುವಾಗ “ಅಮ್ಮುಂಜೆ ಮಣೇಲ್ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್ ಜಪ್ಪುಲೆ” ಎಂದು ಹೇಳಿದಾಗ ಚೆಂಡು ಹಿಡಿದಿದ್ದ ಗಾಣಿಗ ಮನೆತನದವರು ಚೆಂಡನ್ನು ಅರ್ಚಕರಲ್ಲಿ ಕೊಡುತ್ತಾರೆ.
ಆಗ ಅವರು ಚೆಂಡನ್ನು ಹಾರಿಸಿ ಎಸೆಯುತ್ತಾರೆ. ಆಗ ಅಮ್ಮುಂಜೆ ಮಳಲಿ ಕಡೆಯ ಯುವಕರು, ಮಕ್ಕಳು ಚೆಂಡಾಟದಲ್ಲಿ ಭಾಗವಹಿಸುತ್ತರೆ. ಚೆಂಡು ಗದ್ದೆಯ ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಗೆಲುವು ಅವರಿಗಾಗುತ್ತದೆ.
ಹೀಗೆ ದಿನಕ್ಕೆ ಮೂರು ಬಾರಿ ಚೆಂಡಾಟ ನಡೆಯುವುದು. ನಂತರ ಚೆಂಡನ್ನು ಶ್ರೀ ದೇವಾಲಯಕ್ಕೆ ತಂದು ಶ್ರೀ ದೇವಿಗೆ ಪೂಜೆ ನಡೆದು ದೇವಸ್ಥಾನಕ್ಕೆ ಒಂದು ಸುತ್ತು ಮೆರವಣಿಗೆಯಲ್ಲಿ ತಂದಲ್ಲಿಗೆ ಚೆಂಡಿನ ಉತ್ಸವ ಮುಕ್ತಾಯವಾಗುವುದು. ಇದಕ್ಕೆ ಜೀಟಿಗೆ ಸಲಾಂ ಎಂದು ಕರೆಯುತ್ತಾರೆ. ಹೀಗೆ ಪೊಳಲಿಯಲ್ಲಿ ಐದು ದಿನಗಳ ಚೆಂಡಿನ ಉತ್ಸವ ನಡೆಯುತ್ತದೆ.