ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಆರ್ಶೀವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ
ಬಂಟ್ವಾಳ: ಕಾಂಗ್ರೆಸ್ ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದಲ್ಲಿರುವ ನಿವಾಸಕ್ಕೆ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಬುಧವಾರ ಭೇಟಿ ನೀಡಿ ಆರ್ಶೀವಾದ ಪಡೆದರು.
ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಪದ್ಮರಾಜ್ ಆರ್.ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ನೇರವಾಗಿ ಹಿರಿಯ ಕಾಂಗ್ರೆಸ್ ನ ಹಿರಿಯ ನೇತಾರರಾದ ಜನಾರ್ದನ ಪೂಜಾರಿ ಅವರ ಮನೆಗೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಅವರು ಮಾತನಾಡಿ,ಪದ್ಮರಾಜ್ ಅವರಿಗೆ ದೇವರ ಸಂಪೂರ್ಣ ಆರ್ಶೀವಾದವಿದ್ದು, ಕಾರ್ಯಕರ್ತರು ಅವರ ಗೆಲುವಿಗೆ ಹಗಲು,ರಾತ್ರಿ ಶ್ರಮಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಅಭ್ಯರ್ಥಿ ಪದ್ಮರಾಜ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತನ್ನ ಗುರುಸಮಾನರಾದ ಜನಾರ್ದನ ಪೂಜಾರಿಯವರಿಗೆ ಬಡವರ ಮೇಲಿರುವ ತುಡಿತ,ಅವರು ಸಂಸದರಾಗಿ,ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ಮಾಡಿರುವ ಸಾಧನೆ ತನ್ನ ರಾಜಕೀಯ ಪ್ರವೇಶಕ್ಕೆ ಪ್ರೇರಪಣೆಯಾಗಿದೆ ಎಂದರು.
ಪಕ್ಷ ತನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಪೂಜಾರಿ ಅವರ ಆರ್ಶೀವಾದ ಪಡೆದಿದ್ದೆನೆ. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಪಾರದರ್ಶಕ,ಪ್ರಾಮಾಣಿಕವಾದ ರಾಜಕಾರಣದ ಮೂಲಕ ಬಡವರ ಸೇವೆ ಮಾಡುವುದರ ಜತೆಗೆ ಜನಾರ್ದನ ಪೂಜಾರಿಯವರ ಕನಸಿನ ಅನೇಕ ಕಾರ್ಯಗಳಿಗೆ ಬಲತುಂಬುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ,ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ ಜೈನ್, ಪ್ರಮುಖರಾದ ಸುನಿಲ್ ಬಜಲಕೇರಿ, ಅಪ್ಪಿ , ದೀಪಕ್ ಪೆರ್ಬುದೆ, ದೀಪಕ್ ಪಿಲಾರ್, ಮಧುಸೂದನ್ ಶೆಣೈ ಕಳ್ಳಿಗೆ, ದಿನೇಶ್ ಶೆಟ್ಟಿ ,ಸುರೇಶ್ ಜೋರಾ, ನಿತಿನ್ ಬೆಳುವಾಯಿ, ಪ್ರವೀಣ್ ಫರಂಗಿಪೇಟೆ ಮತ್ತಿತರರು ಹಾಜರಿದ್ದರು