ಬಂಟ್ವಾಳ ಗ್ರಾಮಾಭಿವೃದ್ಧಿ ಯೋಜನೆ ಉನ್ನತಿ ಸೌಧದಲ್ಲಿ “ನವಜೀವನೋತ್ಸವ”
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಬೆಳ್ತಂಗಡಿ, ಜನಜಾಗೃತಿ ವೇದಿಕೆ ಬಂಟ್ವಾಳ ಹಾಗೂ ನವಜೀವನ ಸಮಿತಿಗಳ ಆಶ್ರಯದಲ್ಲಿ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಭಾನುವಾರ ‘ನವಜೀವನೋತ್ಸವ’ ಕಾರ್ಯಕ್ರಮ ನಡೆಯಿತು.
ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅವರು ಉದ್ಘಾಟಿಸಿ ಮಾತನಾಡಿ, ತಮ್ಮ ಬದುಕಿಗೆ ಹೊಸ ರೂಪವನ್ನು ನೀಡಿದ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸುವುದು ಮುಖ್ಯವಾಗಿದ್ದು, ಬದುಕಿನಲ್ಲಿ ಸಾರ್ಥಕತೆಯನ್ನು ಗಳಿಸಬೇಕಾದರೆ, ನಮ್ಮ ಬದುಕನ್ನು ಪುನರ್ ರೂಪಿಸಿದಂತೆ ಮತ್ತೊಬ್ಬರ ಬದುಕಿಗೂ ಬೆಳಕಾಗುವ ಮೂಲಕ ಸಮಾಜವನ್ನು ಕಟ್ಟಿ ಬೆಳೆಸೋಣ ಎಂದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಹೊಸ ಬದುಕು ಕಟ್ಟಿಕೊಂಡವರು ಮತ್ತೆಂದು ದುಶ್ಚಟಗಳಿಗೆ ತುತ್ತಾಗದೆ ಸುಖೀ ಸಂಸಾರ ನಡೆಸುವಂತೆ ಸಲಹೆ ನೀಡಿದರು. ಪದ್ಮನಾಭ ಮಾವಿನಕಟ್ಟೆ ಮತ್ತು ಹೇಮಾವತಿ ಮಾವಿನಕಟ್ಟೆ ನವಜೀವನ ಕುಟುಂಬಗಳ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಪೂರಕವಾಗಿರುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ನವಜೀವನ ಕುಟುಂಬಗಳ ಅಭ್ಯುದಯಕ್ಕೆ ಕಾರ್ಯಕ್ರಮಗಳನ್ನು ಇನ್ನು ಮುಂದಕ್ಕೂ ನಡೆಸಲಿದ್ದೇವೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಹರೀಶ ಮಾಂಬಾಡಿ ಮಾತನಾಡಿ ಮದ್ಯಪಾನವಷ್ಟೇ ಅಲ್ಲ, ಮಾದಕ ದ್ರವ್ಯ ವ್ಯಸನವೂ ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿದ್ದು, ಈ ಕುರಿತು ಗಂಭೀರವಾಗಿ ಸಮಾಜ ಯೋಚಿಸಬೇಕು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ ಆಚಾರ್ಯ ಮಾತನಾಡಿ, ನವಜೀವನ ಸಮಿತಿಗಳ ಸಭೆ, ಸಂಘಟನೆ, ಬಲವರ್ಧನೆ, ಸ್ವ-ಉದ್ಯೋಗ ಮತ್ತು ನವಜೀವನೋತ್ಸವ ಕಾರ್ಯಕ್ರಮದ ಮಹತ್ವ ಕುರಿತು ವಿವರಿಸಿದರು.
ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷರಾದ ಚಿದಾನಂದ ರೈ ಕಕ್ಯ, ವಲಯಾಧ್ಯಕ್ಷರಾದ ಚಂದಪ್ಪ ಮೂಲ್ಯ, ಪುರುಷೋತ್ತಮ ಕೊಟ್ಟಾರಿ, ಪುರುಷೋತ್ತಮ ವಗ್ಗ, ಸದಾನಂದ ಶೀತಲ್, ಜನಜಾಗೃತಿ ವೇದಿಕೆ ಸದಸ್ಯರಾದ ಶೇಖರ ಸಾಮಾನಿ, ಭಾರತಿ ಚೌಟ, ಕೃಷ್ಣ ಅಲ್ಲಿಪಾದೆ ಉಪಸ್ಥಿತರಿದ್ದರು.
ಬಂಟ್ವಾಳ ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನಜಾಗೃತಿ ಉಡುಪಿ ಪ್ರಾದೇಶಿಕ ವಿಭಾಗ ಮೇಲ್ವಿಚಾರಕ ಮೇಲ್ವಿಚಾರಕ ನಿತೇಶ್ ಕೆ ವಂದಿಸಿದರು. ಶಿಬಿರಾಧಿಕಾರಿ ದಿವಾಕರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಯೋಜನೆಯ ಮದ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಂಡು ಹೊಸಜೀವನ ನಡೆಸುತ್ತಿರುವ ಸದಸ್ಯರಿಗಾಗಿ ನವಜೀವನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂದರ್ಭ ಆರೋಗ್ಯ ತಪಾಸಣೆ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆದವು.