Published On: Sat, Mar 2nd, 2024

ಮಾ.೩ ರಂದು ಶ್ರೀ ಕ್ಷೇತ್ರ ಕಾರಿಂಜಕ್ಕೆ ಮಹಾರಥ ಸಮರ್ಪಣೆ

ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಇತಿಹಾಸ ಪ್ರಸಿದ್ಧ  ಬಂಟ್ವಾಳ ತಾಲೂಕಿನ  ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ೫೦ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಹಾರಥದ ಸಮರ್ಪಣೆ ಕಾರ್ಯಕ್ರಮ ಮಾ.೩ ರಂದು ನಡೆಯಲಿದೆ.

ದೇವಸ್ಥಾನದ ಜಾತ್ರೆಯ ವೇಳೆ ಶ್ರೀ ಪಾರ್ವತಿ ಪರಮೇಶ್ವರ ದೇವರು ರಥಾರೂಢರಾಗುವ ರಥವು ಶಿಥಿಲಗೊಂಡಿದ್ದು, ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಗ್ರಾಮಸ್ಥರು ಈ ವರ್ಷದ ಜಾತ್ರೆ ವೇಳೆ ನೂತನ ನಿರ್ಮಾಣ ಮಾಡಿ ಸಮರ್ಪಿಸುವ ಸಂಕಲ್ಪ ತೊಟ್ಟಿದ್ದು, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಥ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿ ಇದರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ನಡೆದಿದೆ.

ನೂತನ ಮಹಾರಥವನ್ನು ದೇಗುಲಕ್ಕೆ ಸಮರ್ಪಿಸುವ ಮುನ್ನ ಶೋಭಾಯಾತ್ರೆ ನಡೆಯಲಿದ್ದು, ಮಧ್ಯಾಹ್ನ ೩ ಗಂಟೆಗೆ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಚಾಲನೆ ನೀಡಲಾಗುವುದು.

ಬಳಿಕ ಬಂಟ್ವಾಳ, ವಗ್ಗ, ಕಾವಳಕಟ್ಟೆ, ಎನ್‌ಸಿ ರೋಡ್, ಮಾರ್ಗವಾಗಿ ಕಾರಿಂಜಕ್ಕೆ ಮೆರವಣಿಗೆ ಸಾಗಿ ಬರಲಿದೆ. ಬಳಿಕ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಸಮರ್ಪಣೆ ಕಾರ್ಯಕ್ರಮ, ಧಾರ್ಮಿಕ ಸಭೆ ನಡೆಯಲಿದೆ.

ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮುಂಬ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಪುಣೆ ಉದ್ಯಮಿ ಕೆ.ಕೆ.ಶೆಟ್ಟಿ, ಮತ್ತಿತರರು ಭಾಗವಹಿಸಲಿರುವರು.

ಬಳಿಕ ಪರಿಮಳ ಕಾಲನಿ ತುಳು ನಾಟಕ ಪ್ರದರ್ಶವಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter