Published On: Sat, Feb 10th, 2024

ಬೊಂಡಾಲ: ಯಕ್ಷಗಾನ ಸೇವಾ ಬಯಲಾಟಕ್ಕೆ ಸುವರ್ಣ ಸಂಭ್ರಮ, ಸನ್ಮಾನ, ಪ್ರಶಸ್ತಿ‌ ಪ್ರದಾನ

ಬಂಟ್ವಾಳ: ತಾಲೂಕಿನ  ಶಂಭೂರು ಗ್ರಾಮದ ಬೊಂಡಾಲದಲ್ಲಿ ಕಳೆದ ಐದು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟಕ್ಕೆ ಇದೀಗ ಸುವರ್ಣ ಸಂಭ್ರಮ.

ಈ ಪ್ರಯುಕ್ತ ಫೆ.14, 15, 16 ರಂದು ಯಕ್ಷಗಾನ ಬಯಲಾಟ, ಸನ್ಮಾನ, ಬೊಂಡಾಲ ಪ್ರಶಸ್ತಿ ಪ್ರದಾನ, ಮೇಳಕ್ಕೆ ಬೆಳ್ಳಿಯ ಆಯುಧ ಸಮರ್ಪಣಾ ಕಾರ್ಯ ನಡೆಯಲಿದೆ ಎಂದು ಬಯಲಾಟ ಸೇವಾ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಫೆ.14 ರಂದು ಸುವರ್ಣ ಸಂಭ್ರಮದ ಪ್ರಯುಕ್ತ ಶ್ರೀದೇವರಿಗೆ ವಿಶೇಷ ಸೇವೆಯಾಟ ನಡೆಯಲಿದ್ದು, ಅಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಟೀಲಿನ ನಾಲ್ಕು ಮೇಳಗಳಿಗೆ ಬೇಕಾದಂತ ಸುಮಾರು 2 ಲಕ್ಷ ರೂ.ವೆಚ್ಚದ ಬೆಳ್ಳಿಯ ಆಯುಧಗಳನ್ನು ಸಮರ್ಪಿಸಲಾಗುವುದು ಎಂದರು.

ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ‌ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಟೀಲಿನ ಅನುವಂಶಿಕ ಮೊಕ್ತೇಸರ ಶ್ರೀ ಲಕ್ಷೀನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ.

ಈ ಸಂದರ್ಭ ಮೇಳದ ಕಲಾವಿದರು, ಬಯಲಾಟದ ಆರಂಭಿಕ ಹಂತದಲ್ಲಿ ಸಹಕರಿಸಿದ ಹಿರಿಯರ ಮನೆಯವರಿಗೆ, ಸಮಿತಿ ಸದಸ್ಯರು, ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದರು.

ಬೊಂಡಾಲ ಪ್ರಶಸ್ತಿ ಪ್ರದಾನ;
ಕಟೀಲು ಮೇಳದ ಖ್ಯಾತ ವೇಷಧಾರಿ ಮೋಹನ್ ಕುಮಾರ್ ಅಮ್ಮುಂಜೆ ಅವರು‌  2024 ರ “ಬೊಂಡಾಲ ಪ್ರಶಸ್ತಿ” ಗೆ ಆಯ್ಕೆಯಾಗಿದ್ದರೆ,
ಬೊಂಡಾಲ ಯಕ್ಷೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ  ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸಹಿತ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆಯವರನ್ನು ಸುವರ್ಣೋತ್ಸವದ ಗೌರವ ನೀಡಿ ಅಭಿನಂದಿಸಲಾಗುವುದು ಎಂದು ಸಚ್ಚಿದಾನಂದ ಶೆಟ್ಟಿ ವಿವರಿಸಿದರು.

ಫೆ.15 ರಂದು ನಡೆಯುವ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸಲಿದ್ದು, ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ರಮಾನಾಥ ರೈ, ವಿ.ಪ.ಸದಸ್ಯ ಮಂಜುನಾಥ ಭಂಡಾರಿ, ಡಾ.ಮೋಹನ್ ಆಳ್ವ ಮೂಡಬಿದ್ರೆ, ಜಗನ್ನಾಥ ಬಂಗೇರ ನಿರ್ಮಾಲ್ ಅತಿಥಿಯಾಗಿ ಭಾಗವಹಿಸಲಿದ್ದು, ಕಟೀಲಿನ ಶ್ರೀ ಅನಂತ ಪದ್ಮನಾಭ ಅಸ್ರಣ್ಣರು ಆಶೀರ್ವನ ನೀಡಲಿದ್ದಾರೆ‌ ಎಂದರು.

ಫೆ.16 ರಂದು ಹರಕೆಯ ಬಾಬ್ತು ಯಕ್ಷಗಾನ ಬಯಲಾಟ ನಡೆಯಲಿದೆ. ಮೂರು ದಿನವು ಕಾಲಮಿತಿಯಲ್ಲೇ ಯಕ್ಷಗಾನ ಬಯಲಾಟ ನಡೆಯಲಿದೆ ಎಂದ ಅವರು ವಿಶೇಷವಾಗಿ ಕಳೆದ 50 ವರ್ಷಗಳಲ್ಲು ಕಟೀಲಿನ ಒಂದನೇ ಮೇಳವೇ ಯಕ್ಷಗಾನ ಬಯಲಾಟವನ್ನು ಪ್ರದರ್ಶನ ನೀಡುತ್ತಾ ಬಂದಿದೆ ಎಂದರು.

ಬೊಂಡಾಲದಲ್ಲಿ ನಢಯುತ್ತಿರುವ ಯಕ್ಷಗಾನ ಬಯಲಾಟದ ಸುವರ್ಣ ಯಾನದಲ್ಲಿ ಗ್ರಾಮದ ಜನತೆಯ ಭಕ್ತಿ-ಶ್ರದ್ಧೆಗಳ ಭಾವನಾತ್ಮಕವಾದ ಬೆಸುಗೆ ಇದೆ. ಹಳೆಯ ತಲೆಮಾರಿನ ಹಿರಿಯ ಅರ್ಥಧಾರಿ, ಶಿಕ್ಷಕ ಮತ್ತು ಊರಿನ ಪಟೇಲರಾಗಿದ್ದ ಬೊಂಡಾಲ ಜನಾರ್ದನ ಶೆಟ್ಟಿಯವರ ದಕ್ಷ ನಾಯಕತ್ವದಲ್ಲಿ ಬಯಲಾಟ ಸಾಗಿ ಬಂದಿತ್ತು. ಅವರೊಂದಿಗೆ ಬೊಂಡಾಲದ ಅನೇಕ ಹಿರಿಯರು ಮತ್ತು ಉತ್ಸಾಹೀ ತರುಣರು ಕೈಜೋಡಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ‌ ಹಾಜರಿದ್ದ ಸುವರ್ಣ ಸಂಭ್ರಮ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ‌ ತಿಳಿಸಿದರು.

ಇದೀಗ ರಾಮಣ್ಣ ಶೆಟ್ಟರ ಹಿರಿಯ ಪುತ್ರ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಾ ಬರುತ್ತಿದ್ದು, ಈವರೆಗೆ ಸರಿ ಸುಮಾರು 30 ಮಂದಿ ಕಲಾವಿದರಿಗೆ ಬೊಂಡಾಲ ಪ್ರಶಸ್ತಿ ಸಂದಿದೆ ಎಂದ ಅವರು ಸಭಾ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ ಇರಲಿದ್ದು, ಸುವರ್ಣ ಸಂಭ್ರಮದ ಪ್ರಯುಕ್ತ ಈ ಹಿಂದಿನಂತೆ ಮಡಲಿನ( ತಾಳೆಗರಿ) ಚೌಕಿ ನಿರ್ಮಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ, ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಪದ್ಮನಾಭ ಏಲಬೆ, ಕೋಶಾಧಿಕಾರಿ ಸುನಾದ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter