ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಬ್ರಹ್ಮಕಲಶ : ಆಮಂತ್ರಣಪತ್ರ ಬಿಡುಗಡೆ
ಬಂಟ್ವಾಳ: ತಾಲೂಕಿನ ತುಂಬೆ ಶ್ರೀ ಮಹಾಲಿಂಗೇಶ್ವರ ಮತ್ತು ಪರಿವಾರ ದೇವರ ದೇವಳದಲ್ಲಿ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವವು ಫೆ.13ರಿಂದ23ರ ವರೆಗೆ ನಡೆಯಲಿರುವ ಹಿನ್ನಲೆಯಲ್ಲಿ ಅಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಕ್ಷೇತ್ರದ ಹರಿಹರ ಸಂಕೀರ್ತನೆ ವೇದಿಕೆಯಲ್ಲಿ ಸೋಮವಾರ ಸಂಜೆ ನಡೆಯಿತು.

ದೇವಳದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ, ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡ್ಯೆ ಅಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ತುಂಬೆ ಮತ್ತು ಅಸುಪಾಸಿನ ಸಮಸ್ತರಿಗೆ ಶ್ರೀ ಮಹಾಲಿಂಗೇಶ್ವರನ ಬ್ರಹ್ಮಕಳಶದಲ್ಲಿ ಭಾಗವಹಿಸುವ ಯೋಗ ಭಾಗ್ಯ ದೊರೆತಿದೆ, ದೇವರಿಗೆ ಬ್ರಹ್ಮಕಲಶ ಸಂಪನ್ನಗೊಳ್ಳುವವರೆಗೆ ಗ್ರಾಮಸ್ಥರು ಶುದ್ದಾಚಾರದಲ್ಲಿದ್ದು, ತನ್ನನ್ನು ತಾನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು, ಮಕ್ಕಳಿಗೂ ಧಾರ್ಮಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಹೆತ್ತವರು ಮುಂದಾಗಬೇಕು ಎಂದರು.

ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ,ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾತನಾಡಿ, ದೇವರ ಮತ್ತು ಭಕ್ತರ ಇಚ್ಚೆಯಾನುಸಾರವಾಗಿ ದೇವಸ್ಥಾನದ ನಿರ್ಮಾಣವಾಗುತ್ತಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ ಮಾತನಾಡಿ ಬ್ರಹ್ಮಕಲಶದ ಯಶಸ್ವಿಗೆ ಸರ್ವರ ಸಹಕಾರದ ಅಗತ್ಯವಿದೆ ಎಂದರು.
ಗುತ್ತಿಗೆದಾರ ದಿವಾಕರ್, ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು ಅರುಣ್ ಆಳ್ವ, ಉಮೇಶ್ ಸುವರ್ಣ, ಜಗನ್ನಾಥ ಶೆಟ್ಟಿ ತುಂಬೆಗುತ್ತು, ಶ್ರೀಧರ ರಾವ್, ತುಂಬೆ ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಬಂಟ್ವಾಳ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಜೀವನ್ ಆಳ್ವ ತುಂಬೆ ಗುತ್ತು, ಗೋಪಾಲಕೃಷ್ಣ ಸುವರ್ಣ ತುಂಬೆ, ಮೋನಪ್ಪ ಮಜಿ,ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ, ಸದಾಶಿವ ತುಂಬೆ, ಅರ್ಚಕ ಅಭಿಲಾಷ್ ಭಟ್ ಮೊದಲಾದವರಿದ್ದರು.
ಜೀರ್ಣೋದ್ದಾರ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಬಿ.ತುಂಬೆ ವಂದಿಸಿದರು. ಉಮೇಶ್ ರೆಂಜೋಡಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕು ಮುನ್ನ ಶ್ರೀ ದೇವರ ಸಾನಿಧ್ಯದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.