ಫಿಫಾ ಜೂನಿಯರ್ ವಿಶ್ವಕಪ್ ಟೂರ್ನಿಗೆ ಆತಿಥ್ಯದ ಅವಕಾಶ ದೊರೆತದ್ದನ್ನು ಬಿಟ್ಟರೆ, ಭಾರತದ ಫುಟ್‌ಬಾಲ್‌ಗೆ 2013ರ ಋತು ‘ಕಹಿ’ಯಾಗಿಯೇ ಕಾಣಿಸಿದೆ. ಸ್ಯಾಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವಿಫಲವಾದದ್ದು ಅತೀವ ನಿರಾಸೆಗೆ ಕಾರಣವಾಯಿತು.
ಫಿಫಾ ಜೂನಿಯರ್ ವಿಶ್ವಕಪ್‌ಗೆ ಆತಿಥ್ಯ: 2017ರ ಫಿಫಾ ಜೂನಿಯರ್ (17 ವರ್ಷ ವಯಸ್ಸಿನೊಳಗಿನವರ) ವಿಶ್ವಕಪ್ ಟೂರ್ನಿಗೆ ಆತಿಥ್ಯದ ಅವಕಾಶ ಪಡೆದದ್ದು ಭಾರತದ ಪಾಲಿಗೆ ಸಂತಸ ತಂದಿತ್ತ ಬೆಳವಣಿಗೆ. ಇದು ಭಾರತದ ಫುಟ್‌ಬಾಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎನಿಸಿಕೊಂಡಿದೆ.
ಆತಿಥೇಯರು ಎಂಬ ಕಾರಣ ಭಾರ ತದ ತಂಡ ಕೂಡಾ ಈ ವಿಶ್ವಕಪ್‌ನಲ್ಲಿ ಆಡಲಿದೆ. ಈ ಕೂಟ ದೇಶದ ಫುಟ್ ಬಾಲ್ ಕ್ರೀಡೆಯ ದಿಕ್ಕನ್ನೇ ಬದಲಿಸಲಿದೆ ಎಂಬುದು ಪಂಡಿತರ ಲೆಕ್ಕಾಚಾರ.
ಸ್ಯಾಫ್‌ನಲ್ಲಿ ನಿರಾಸೆ: ಹಲವು ವರ್ಷಗಳಿಂದ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಭುತ್ವ ಮೆರೆದಿದ್ದ ಭಾರತ ಈ ಬಾರಿ ಎಡವಿದ್ದು ಅಚ್ಚರಿಗೆ ಕಾರಣವಾಯಿತು. ಇದುವರೆಗೆ ನಡೆದ 10 ಟೂರ್ನಿಗಳಲ್ಲಿ ಭಾರತ ಆರು ಸಲ ಚಾಂಪಿಯನ್ ಆಗಿದೆ.
ಆದರೆ ಕಠ್ಮಂಡುವಿನಲ್ಲಿ ನಡೆದ ಈ ಬಾರಿಯ ಟೂರ್ನಿಯಲ್ಲಿ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಲೀಗ್ ಹಂತದಲ್ಲಿಆತಿಥೇಯ ನೇಪಾಳದ ಕೈಯಲ್ಲಿ 1-2 ರಲ್ಲಿ ಸೋಲು ಅನುಭವಿಸಿದ ತಂಡ ಫೈನಲ್‌ನಲ್ಲಿ 0-2 ರಲ್ಲಿ ಆಫ್ಘಾನಿಸ್ತಾನ ಕೈಯಲ್ಲಿ ಪರಾಭವಗೊಂಡಿತು.
ಸೌಹಾರ್ದ ಪಂದ್ಯಗಳು: ಈ ವರ್ಷ ಭಾರತ ಒಟ್ಟು ನಾಲ್ಕು ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳನ್ನು ಆಡಿತು. ಇದರಲ್ಲಿ ಒಂದು ಪಂದ್ಯದಲ್ಲಿ ಗೆಲುವು ಹಾಗೂ ಎರಡು ಪಂದ್ಯಗಳಲ್ಲಿ ಸೋಲು ಎದುರಾಗಿವೆ. ಮತ್ತೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಪ್ಯಾಲೆಸ್ಟೈನ್ ಮತ್ತು ತಾಜಿಕಿಸ್ತಾನ ಎದುರು ಕ್ರಮವಾಗಿ 2-4 ಹಾಗೂ 0-3 ರಲ್ಲಿ ಸೋಲು ಅನುಭವಿಸಿತು. ನೇಪಾಳ ತಂಡವನ್ನು 2-0 ರಲ್ಲಿ ಮಣಿಸಿದರೆ, ಫಿಲಿಪ್ಪೀನ್ಸ್ ಜೊತೆ 1-1 ಗೋಲಿನ ಡ್ರಾ ಸಾಧಿಸಿತು.
ಎಎಫ್‌ಸಿ ಕಪ್‌ಗೆ ಅರ್ಹತೆ ಪಡೆಯಲು ವಿಫಲ: ಎಎಫ್‌ಸಿ ಚಾಲೆಂಜ್ ಕಪ್ ಟೂರ್ನಿಯ ಫೈನಲ್ ಸುತ್ತು ಪ್ರವೇಶಿಸಲು ಭಾರತ ವಿಫಲವಾಯಿತು. ಮ್ಯಾನ್ಮಾರ್‌ನಲ್ಲಿ ನಡೆದ ಅರ್ಹತಾ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯರ ಕೈಯಲ್ಲಿ 0-1 ರಲ್ಲಿ ಸೋಲು ಅನುಭವಿಸಿತು.
ವೈಯಕ್ತಿಕವಾಗಿ ಕೆಲವು ಆಟಗಾರರು ಈ ಬಾರಿ ಗಮನ ಸೆಳೆದರು. ಭಾರತ ತಂಡದ ಗೋಲ್‌ಕೀಪರ್ ಸುಬ್ರತಾ ಪಾಲ್ ಡೆನ್ಮಾರ್ಕ್‌ನ ಎಫ್‌ಸಿ ವೈಕಿಂಗ್ಸ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡದ್ದು ಆಶಾದಾಯಕ ಬೆಳವಣಿಗೆ ಎನಿಸಿತು. ಪಾಲ್ ಜನವರಿ 1 ರಿಂದ ಆರು ತಿಂಗಳ ಕಾಲ ಈ ಕ್ಲಬ್ ಪರ ಆಡಲಿದ್ದಾರೆ.
ಸುನಿಲ್ ಚೆಟ್ರಿ ಒಟ್ಟು 43 ಗೋಲುಗಳನ್ನು ಗಳಿಸಿ ಭೈಚುಂಗ್ ಭುಟಿಯಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಕೆಲವು ಕ್ಲಬ್‌ಗಳೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದವು. ಈಸ್ಟ್ ಬೆಂಗಾಲ್ ತಂಡ ಎಎಫ್‌ಸಿ ಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಪುಣೆ ಎಫ್‌ಸಿ ತಂಡಕ್ಕೆ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ‘ಪ್ಲೇ ಆಫ್’ನಲ್ಲಿ ಆಡುವ ಅವಕಾಶ ದೊರೆಯಿತು. ಇದೇ ಚೊಚ್ಚಲ ಬಾರಿ ಐ-ಲೀಗ್‌ನಲ್ಲಿ ಆಡುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಹದಿನೈದು ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.
