Published On: Wed, Nov 8th, 2023

ಬಿಜೆಪಿಯಲ್ಲಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವುದಕ್ಕೆ ಸಾಧ್ಯವಿಲ್ಲ: ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಉನ್ನತವಾದ ಸ್ಥಾನವನ್ನು ಪಡೆಯಲು ಸಾಧ್ಯ, ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವ ಕಟಿಬದ್ಧ ಕಾರ್ಯಕರ್ತ ಶಾಸಕ ಅಥವಾ ಸಂಸದನಾಗಬಹುದು. ಆದರೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವುದಕ್ಕೆ ಸಾಧ್ಯವಿಲ್ಲ, ನಮ್ಮ ಪಾರ್ಟಿಯಲ್ಲಿ ಅಭ್ಯರ್ಥಿ ಯಾರೆಂಬುವುದನ್ನು ಪಾರ್ಟಿಯ ರಾಷ್ಟ್ರೀಯಾಧ್ಯಕ್ಷರು ಮತ್ತು ರಾಷ್ಟ್ರೀಯ ಸಮಿತಿ ನಿರ್ಧರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮಂಗಳವಾರ ನಡೆದ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯ ನಿರ್ವಹಣಾ ತಂಡದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಬಿಜೆಪಿ  ರಾಷ್ಟ್ರಭಕ್ತ ಕಾರ್ಯಕರ್ತರ ಪಾರ್ಟಿಯಾಗಿದ್ದು, ರಾಷ್ಟ್ರಹಿತಕ್ಕಾಗಿ ಬಿಜೆಪಿಯ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಮ್ಮ ಹಿರಿಯರು ಶ್ರಮಿಸಿ ಕಟ್ಟಿರುವ ಪಾರ್ಟಿ ಬಿಜೆಪಿ. ಹಾಗಾಗಿ ಜವಾಬ್ದಾರಿಯುತ ಕಾರ್ಯಕರ್ತರಾದ ನಮಗೆ ಕಮಲದ ಚಿಹ್ನೆ ಮಾತ್ರ ನಮ್ಮ ಕಣ್ಣಮುಂದೆ ಇರುತ್ತೆ ಹೊರತು ವ್ಯಕ್ತಿಯಲ್ಲ ಎಂದರು.

ನಮ್ಮ ಸದ್ವಿಚಾರಗಳು ಮತ್ತು ಸದುದ್ಧೇಶಗಳು ರಾಷ್ಟ್ರ ಚಿಂತನೆಯ ಆಧಾರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿದೆ ಎಂದ ಸಂಸದ ನಳಿನ್ ಕುಮಾರ್ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ರಾಷ್ಷ್ಟವನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವುದು. ಅದಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಮಲವನ್ನು ಅರಳಿಸುವ ಕಾರ್ಯ ಮಾಡೋಣ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಮಾತನಾಡಿ ಪ್ರತಿ ಚುನಾವಣೆಯಿಂದ ಚುನಾವಣೆಗೆ ನಾವು ಬಹಳಷ್ಟು ಪಾಠಗಳನ್ನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಮುಂದೆ ಬರುವ ರಾಷ್ಟ್ರದ ಭವಿಷ್ಯ ಬರೆಯುವ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ಧರಾಗಬೇಕು. ಭಾರತ ವಿಶ್ವದಲ್ಲಿ ತಲೆ ಎತ್ತಿ ನಿಲ್ಲಬೇಕು. ಅದಕ್ಕಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು ಸಭೆಯನ್ನುದ್ಧೇಶಿಸಿ  ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ  ದೇವಪ್ಪ ಪೂಜಾರಿಯವರು ಬಂಟ್ವಾಳ ಮಂಡಲದಲ್ಲಿ ಬಿಜೆಪಿಯ ಇತ್ತೀಚಿನ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ರಾಜ್ಯ ಮಾಧ್ಯಮ ಪ್ರಮುಖರಾದ ವಿಕಾಸ್ ಪುತ್ತೂರು ಅವರು ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದ ಚುನಾವಣೆ ಮತ್ತು ಮತದಾರರನ್ನು ನೋಂದಾಯಿಸುವ  ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಜಿಲ್ಲಾ ಪ್ರಭಾರಿಗಳಾದ  ರಾಜೇಶ್ ಕಾವೇರಿ, ಬಂಟ್ವಾಳ ಮಂಡಲ ಪ್ರಭಾರಿ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜ್ಯ ಕಿಯೋನಿಕ್ಸಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಬಂಟ್ವಾಳ ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಮತ್ತು ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಪ್ರಕೋಷ್ಟಗಳ ಸಂಚಾಲಕರು, ಪುರಸಭಾ ಸದಸ್ಯರು, ಮೊದಲಾದವರು  ಭಾಗವಹಿಸಿದರು.


ನುಡಿನಮನ: ಮಂಗಳವಾರ ನಿಧನರಾದ ರಾಜಕೀಯ ಮುತ್ಸದ್ದಿ, ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರಿಗೆ ಮಂಡಲದ ಬಿಜೆಪಿಯ ನಿಕಟ ಪೂರ್ವ ಅಧ್ಯಕ್ಷ ದೇವದಾಸ್ ಶೆಟ್ಟಿಯವರು ನುಡಿ ನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀ ಪುರುಷೋತ್ತಮ ಶೆಟ್ಟಿ ವಂದಿಸಿದರು. ಮಂಡಲ ಯುವಮೋರ್ಚಾ ಅಧ್ಯಕ್ಷ ಶ್ರೀ ಕಿಶೋರ್ ಪಲ್ಲಿಪಾಡಿ ವಂದೇ ಮಾತರಂ ಗೀತೆ ಹಾಡಿದರು. ಮಂಡಲದ ಇನ್ನೋರ್ವ ಪ್ರಧಾನ ಕಾರ್ಯದರ್ಶಿ  ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter