ಆಯುಧ ಪೂಜೆಗೆ ಪವಿತ್ರ ಕುಂಕುಮ, ಅರಶಿನ ನಿಷೇಧ : ಸರಕಾರದ ಧೋರಣೆಗೆ ಖಂಡನೆ
ಬಂಟ್ವಾಳ: ಪಾರಂಪರಿಕ ಕಟ್ಟಡಗಳ ಸೌಂದರ್ಯಗಳಿಗೆ ಧಕ್ಕೆ ಉಂಟಾಗುತ್ತಿರುವುದರಿಂದ ಸೌಂದರ್ಯ ಕಾಪಾಡುವ ನೆಪದಲ್ಲಿ ವಿಧಾನಸೌಧ, ವಿಕಾಸಸೌಧ ಕಟ್ಟಡಗಳಲ್ಲಿ ಆಯುಧ ಪೂಜೆ ಸಂದರ್ಭದಲ್ಲಿ ಪವಿತ್ರ ಕುಂಕುಮ, ಅರಶಿನ,ಕುಂಬಳಕಾಯಿ, ಧಾರ್ಮಿಕ ರಂಗೋಲಿ ಬಳಸದಂತೆ ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದು,ಕರ್ನಾಟಕ ಕಾಂಗ್ರೆಸ್ ಸರಕಾರದ ಈ ಧೋರಣೆಯನ್ನು ಬಿಜೆಪಿ ಮುಖಂಡ,ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು ಖಂಡಿಸಿದ್ದಾರೆ.
ಈ ಕುರಿತು ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿಯವರಿಗೆ ಲಿಖಿತ ಪತ್ರ ಬರೆದಿರುವ ಅವರು, ಈ ಆದೇಶವನ್ನು
ತಕ್ಷಣ ವಾಪಾಸ್ ಪಡೆದು ಅನಾದಿಕಾಲದಿಂದಲೂ ಹಿಂದೂ ಧಾರ್ಮಿಕ ಪದ್ದತಿಯಂತೆ ಆಯುಧ ಪೂಜೆಯನ್ನು ಯಥಾವತ್ತಾಗಿ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕುಂಕುಮ, ವಿಭೂತಿ ಇವುಗಳೆಲ್ಲವನ್ನು ಹಿಂದೂ ಧರ್ಮದ ಆಚರಣೆಗಳಲ್ಲಿ ಬಳಕೆ ಮಾಡಿ ಬಳಿಕ ಭಕ್ತರಿಗೆ ಹಂಚುವ ಕ್ರಮ ಪುರಾತನದಿಂದಲೂ ನಡೆದು ಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಿ ಆಯುಧ ಪೂಜೆ ನೆರವೇರಿಸಲು ಮುಂದಾಗಿರುವ ಸರಕಾರದ ಕ್ರಮ ಸಮಂಜಸವಲ್ಲ ಎಂದು ಪ್ರಭು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಮುಂದುವರಿದರೆ ಕ್ಷುಲ್ಲಕ ನೆಪವೊಡ್ಡಿ ಆಯುಧ ಪೂಜೆಯನ್ನೇ ನಿಷೇಧಿಸಲು ಕಾಂಗ್ರೆಸ್ ಸರಕಾರ ಮುಂದಾದರೂ ಅಚ್ಚರಿಪಡಬೇಕಾಗಿಲ್ಲ, ಈ ನಿಟ್ಟಿನಲ್ಲಿ ಸಮಸ್ತ ಹಿಂದೂ ಸಮಾಜದ ಪರವಾಗಿ ಈ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಲು ಕ್ರಮಕೈಗೊಳ್ಳುವಂತೆ ಪ್ರಭಾಕರ ಪ್ರಭು ಆಗ್ರಹಿಸಿದ್ದಾರೆ.