ಬೋಳಂತೂರು:’’ರೈತ ಸ್ನೇಹಿ ಸಹಕಾರಿ ಸೌಧ’’ದ ಲೋಕಾರ್ಪಣೆ ಹಾಗೂ ಕಲ್ಲಡ್ಕ ರೈ. ಸೇ. ಸ. ಸಂಘದ ಶಾಖೆಯ ಉದ್ಘಾಟನೆ
ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತ ಇದರ ಬೋಳಂತೂರು ಶಾಖೆಯ ನೂತನ ಕಟ್ಟಡ ‘’ರೈತ ಸ್ನೇಹಿ ಸಹಕಾರಿ ಸೌಧ’’ದ ಲೋಕಾರ್ಪಣೆ ಹಾಗೂ ಬೋಳಂತೂರು ಶಾಖೆಯನ್ನು ಬುಧವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ರೈತನ ಬದುಕು ಉತ್ತಮವಾಗಿದ್ದರೆ ಉಳಿದವರ ಜೀವನ ಚೆನ್ನಾಗಿರುತ್ತದೆ. ಹಳ್ಳಿಗೆ ಮೂಲ ಸೌಲಭ್ಯ ಒದಗಿಸಿದರೆ ರೈತ ಹಳ್ಳಿಯಲ್ಲೇ ಉಳಿಯುತ್ತಾನೆ. ಹಳ್ಳಿ ಬದುಕಿಗೆ ಖುಷಿ ಕೊಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಸಹಕಾರಿ ರಂಗದಲ್ಲಿ ಸರ್ವ ಜನಾಂಗದ ರೈತರು ಸೇರಿದ್ದು,ಇದರಲ್ಲಿ ರಾಜಕಾರಣ ಸೇರಬಾರದು, ಆದರೆ ಇತ್ತೀಚಿಗಿನ ದಿನಗಳಲ್ಲಿ ಸರಕಾರದ ನೀತಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದ ಡಾ.ಭಟ್ ಅವರು ರೈತನ ಬದುಕು ಹಸನಾದಾಗ ನಮ್ಮ ಬದುಕು ಉತ್ತಮವಾಗುತ್ತದೆ ಎಂದರು.
ಕ್ಷೀರ ಮತ್ತು ರೈತ ಒಂದು ಚಕ್ರವಿದ್ದಂತೆ ಅವೆರಡು ಈ ಚಕ್ರದೊಳಗಿದ್ದಾಗ ಸುವ್ಯವಸ್ಥಿತವಾದ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದ ಅವರು ಜಗತ್ತು ಈಗ ಪರಿವರ್ತನೆಯಾಗುತ್ತಿದೆ.ಚಂದ್ರಯಾನದ ಮೂಲಕ ಭಾರತ ದೊಡ್ಡ ಸಾಧನೆಯನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಜನತೆಯ ಬದುಕಿಗೆ ಪೂರಕವಾದ ಕಾರ್ಯಗಳಾಗುತ್ತಿದೆ ಎಂದರು.
ಭದ್ರತಾ ಕೋಶವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಯು.ಅವರು ಉದ್ಘಾಟಿಸಿ ಮಾತನಾಡಿ,ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಮುಂಚೂಣಿಯಲ್ಲಿದ್ದು,ಸಹಕಾರಿ ವ್ಯವಸ್ಥೆಯಲ್ಲಿ ಕೃಷಿ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದರು.
ಕೃಷಿಯನ್ನು ನಿರ್ಲಕ್ಷಿಸದೆ ನಮ್ಮ ಸಮಯವನ್ನು ಅದರಲ್ಲಿ ಹೆಚ್ಚು ತೊಡಗಿಸಿಕೊಂಡರೆ ಗರಿಷ್ಠ ಲಾಭ ಗಳಿಸಲು ಸಾಧ್ಯ ಎಂದ ಶಾಸಕರು ಅಡಿಕೆ ಬೆಳೆಯ ಜೊತೆಗೆ ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು ಈ ದೇಶದ ರೈತ ಗಟ್ಟಿಯಾದರೆ ಜಗತ್ತಿನಲ್ಲೇ ಭಾರತ ಪ್ರಬಲ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಿದೆ ಎಂದರು.
ಸಂಘದ ಅಧ್ಯಕ್ಷ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಸ್ವಾಗತಿಸಿ ಬಳಿಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ ಈ ದಿನದಿಂದಲೇ ಚಿನ್ನಾಭರಣ ಸಾಲ ಸೌಲಭ್ಯವನ್ನು ಆರಂಭಿಸಲಾಗುವುದು ಎಂದು ಪ್ರಕಟಿಸಿದರು.
ಸಂಘವು 4.57 ಕೋ.ರೂ. ಪಾಲುಬಂಡವಾಳ,59.73 ಕೋ.ಠೇವಣಿಯನ್ನು ಹೊಂದಿದೆ.ಹಲವಾರು ಸಾಮಾಜಿಕ ಕಾರ್ಯಗಳಿಗೆ ಸಂಘವು ಸ್ಪಂದಿಸಿದೆ.
ಸಂಘವು ಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು,ಈ ಸಾಧನೆಯಲ್ಲಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಶ್ರಮವು ಅಪಾರವಾಗಿದೆ ಎಂದರು.ಗೋದಾಮುಗಳ ಉದ್ಘಾಟನೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ರಾಜಾರಾಮ ಭಟ್ ಟಿ.ಜಿ.ಹಾಗೂ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಉದ್ಘಾಟಿಸಿ ಶುಭಹಾರೈಸಿದರು.
ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಠೇವಣಿ ಪತ್ರ ಹಾಗೂ ಸಾಲ ಮಂಜೂರಾತಿ ಪತ್ರ ವಿತರಿಸಿದರು.
ಬಂಟ್ವಾಳ ಸಹಕಾರಿ ಅಭಿವೃದ್ಧಿ ಅಧಿಕಾರಿ, ಗೋಪಾಲ ಎನ್.ಜೆ., ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪ್ರಗತಿಪರ ಕೃಷಿಕರಾದ ಮಹಾಬಲ ರೈ ಬೋಳಂತೂರು, ನಿರ್ದೇಶಕರಾದ ಗಿರಿಯಪ್ಪಗೌಡ, ಮಹಾಬಲ ಸಾಲ್ಯಾನ್, ನೋಣಯ್ಯ ಎಂ.ಆರ್., ಸುರೇಶ್ ಶೆಟ್ಟಿ, ಚಂದ್ರಶೇಖರ ಟೈಲರ್, ವೆಂಕಟ್ರಾಯ ಪ್ರಭು, ಪೂವಪ್ಪ ಗೌಡ, ಲೋಕಾನಂದ, ಕೊರಗಪ್ಪ ನಾಯ್ಕ್,ಅರುಣಾ ಭಟ್,ವಿಜಯ, ದ.ಕ.ಜಿ.ಕೇ.ಸ.ಬ್ಯಾಂಕ್ ನ ವಲಯ ಮೇಲ್ವಿಚಾರಕ ಕೇಶವ ಕಿಣಿ, ಕಲ್ಲಡ್ಕ ರೈ.ಸೇ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕೆ.ಸಂಘದ ಬೋಳಂತೂರು ಶಾಖಾ ವ್ಯವಸ್ಥಾಪಕಿ ವನಿತಾ ವೇದಿಕೆಯಲ್ಲಿದ್ದರು.
ಇದೇ ವೇಳೆ ಪ್ರಗತಿಪರ ಕೃಷಿಕ ಮಹಾಬಲ ರೈ ಬೋಳಂತೂರು, ಇಂಜಿನಿಯರ್ ರಾಮ್ ಪ್ರಸಾದ್,ಗುತ್ತಿಗೆದಾರ ಚಿತ್ತರಂಜನ್ ಅವರನ್ನು ಸನ್ಮಾನಿಸಲಾಯಿತು.
ಹಾಗೂ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಶಿವರಾಮ್, ಜಗನ್ನಾಥ, ಪುಪ್ಪರಾಜ್, ದಿವಾಕರ್, ಜಯಪ್ರಶಾಂತ್ ಅವರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸುಧಾಕರ ರೈ ಬೋಳಂತೂರು ವಂದಿಸಿ,ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.