ಹಾಡು ಹಗಲೇ ಮನೆ ಕಳ್ಳತನ: ಆರೋಪಿಗಳಿಬ್ಬರ ಬಂಧನ
ಬಂಟ್ವಾಳ: ಹಾಡು ಹಗಲೇ ಮನೆಯಿಂದ ಚಿನ್ನಾಭರಣ ಕಳವುಗೈದ ಕುಖ್ಯಾತ ಚೋರರಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಮಂಗಳೂರು ತಾಲೂಕಿನ ಕಸಬಾ ಬೆಂಗ್ರೆಯ ಮಸೀದಿ ಬಳಿಯ ಬೆಂಗ್ರೆ ಭದ್ರಪಳ್ಳಿ ನಿವಾಸಿ ಮಹಮ್ಮದ್ ಆಯೂಬ್ ಎಂಬವರ ಪುತ್ರ ಫರಾಜ್ (27) ಹಾಗೂ ಸುರತ್ಕಲ್ ಚೊಕ್ಕಬೆಟ್ಟು,ಕೃಷ್ಣಾಪುರ ನಿವಾಸಿ ಅಬ್ಬಾಸ್ ಎಂಬವರ ಪುತ್ರ ತೌಸಿಫ್ ಆಹಮ್ಮದ್ (34) ಎಂದು ಹೆಸರಿಸಲಾಗಿದೆ.

ಬಂಧಿತ ಆರೋಪಿಗಳಿಂದ 12,23,000 ರೂ.ಮೌಲ್ಯದ 223 ಗ್ರಾಂ ಚಿನ್ನಾಭರಣ,3000 ರೂ.ಮೌಲ್ಯದ ಬೆಳ್ಳಿ ವಸ್ತುಗಳು,ಕೃತ್ಯಕ್ಕೆ ಬಳಸಿದ ಮಹೇಂದ್ರ ಕ್ಲೈರೋ ಕಾರು,ಒಂದು ಬೈಕ್ ನ್ನು ಪೊಲೀಸರು ವಶಪಡಿಸಿದ್ದಾರೆ.ಇದರ ಒಟ್ಟು ಮೌಲ್ಯ 15,56,000 ರೂ.ಎಂದು ಅಂದಾಜಿಸಲಾಗಿದೆ.
ಸೆ.1 ರಂದು ಹಾಡುಹಗಲೇ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ದೇವಮಾತ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯವಿರುವ ಮೈಕಲ್ ಡಿಸೋಜ ಅವರ ಮನೆಯ ಮುಂಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದ ಕಳ್ಳರು 5,36 ಲ.ರೂ.ಮೌಲ್ಯದ 115 ಗ್ರಾಂ ಚಿನ್ನಾಭರಣ 3 ಸಾ.ರೂ.ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವುಗೈಯಲಾಗಿತ್ತು.ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಕೇಸು ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆಗಿಳಿದಿದ್ದು,ಇದೀಗ ಆರೋಪಿಗಳನ್ನು ಬಂಧಿಸಿ,ಸೊತ್ತುಗಳನ್ನು ವಶಪಡಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳಿಂದ ವಶಪಡಿಸಲಾದ ಸೊತ್ತುಗಳಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವೊಂದರದ್ದು ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳ ಪೈಕಿ ಫರಾಜ್ ಮಂಗಳೂರು ಉತ್ತರ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.ಈ ಎರಡೂ ಕೇಸಿಗೂ ಬೇಕಾಗಿದ್ದಾನೆ ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ವಂತ್ ಸಿ.ಬಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪಎನ್ .ಎಂ.ಅವರ ಮಾರ್ಗದರ್ಶನ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ನಿರ್ದೇಶನದಲ್ಲಿ,ಪ್ರಭಾರ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಕಲೈಮಾರ್,ರಾಮಕೃಷ್ಣ,ಎಎಸ್ ಐ ನಾರಾಯಣ ಹಾಗೂ ಸಿಬ್ಬಂದಿಗಳಾದ ಇರ್ಷಾದ್ ಪಿ.,ರಾಜೇಶ್,ಮನೋಹರ,ಉಮೇಶ್ ಹಿರೇಮಠ್,ರಂಗನಾಥ್,ಬೆರಳಚ್ಚು ಘಟಕದ ಸಚ್ಚಿನ್,ಉದಯ,ಜಿಲ್ಲಾ ಗಣಕಯಂತ್ರ ಘಟಕದ ದಿವಾಕರ,ಸಂಪತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳ ಬಂಧನ ಕಾರ್ಯಾಚರಣೆಗೆ ಶ್ರಮಿಸಿ ತಂಡವನ್ನು ಎಸ್ಪಿ ರಿಶ್ವಂತ್ ಅವರು ಶ್ಲಾಘಿಸಿದ್ದಾರೆ.