ನಂದಾದೀಪ ಜ್ಞಾನವಿಕಾಸ ಕೇಂದ್ರ ಮಾಮೇಶ್ವರ ಒಕ್ಕೂಟದ ವಾರ್ಷಿಕೋತ್ಸವ
ಬಂಟ್ವಾಳ: ಮಹಿಳೆಯರಲ್ಲಿ ಅರಿವು ಮೂಡಿಸಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ಹೆಗ್ಡೆ ಯವರ ದೂರದೃಷ್ಟಿ ಯೋಜನೆಯ ಕಾರ್ಯಕ್ರಮವೇ ಮಹಿಳಾ ಜ್ಞಾನವಿಕಾಸ ಕೇಂದ್ರ ಎಂದು ವಿಟ್ಲ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣಂತೂರು ಅವರು ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಬೋಳಂತಿಮೊಗೇರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ಇದರ ಕಲ್ಲಡ್ಕ ವಲಯದ ಮಾಮೇಶ್ವರ ಒಕ್ಕೂಟದ “ನಂದಾದೀಪ ಜ್ಞಾನವಿಕಾಸ ಕೇಂದ್ರದ” ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.

ಈ ಕೇಂದ್ರದ ಮೂಲಕ ಮಹಿಳೆಯರಿಗೆ ಸೂಕ್ತ ಮಾಹಿತಿ, ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ಪ್ರೇರೇಪಿಸಿ,ನಾಯಕತ್ವ ಗುಣವನ್ನು ಹೊಂದುವಂತೆ ಮಾಡಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಕೆಲಸ ಅರ್ಥಪೂರ್ಣವಾಗಿದೆ ಎಂದರು.
ಪ್ರೌಢಶಾಲಾ ಶಿಕ್ಷಕ ರಾಮಣ್ಣ ಗೌಡ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್,ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ,ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ಚಂದ್ರ,ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಕರುಣಾಕರ,ಪುತ್ತೂರು ಶಾಲಾ ಶಿಕ್ಷಕಿ ಚೇತನಾ,ಬಂಟ್ವಾಳ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ದಿನೇಶ್,ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ಮಾಡ,ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ,ಕಲಿಂಜ ಒಕ್ಕೂಟದ ಅಧ್ಯಕ್ಷ ದಯಾನಂದ,ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜ್ಞಾನವಿಕಾಸ ಸದಸ್ಯರುಗಳಿಗೆ ಏರ್ಪಡಿಸಲಾದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು, ಜ್ಞಾನವಿಕಾಸ ಸದಸ್ಯರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಜ್ಞಾನವಿಕಾಸ ಸದಸ್ಯೆ ಶಶಿಕಲಾ ಪ್ರಾರ್ಥಿಸಿ, ವನಿತಾ ಸ್ವಾಗತಿಸಿದರು.ಮಾಮೇಶ್ವರ ಒಕ್ಕೂಟದ ಸೇವಾ ಪ್ರತಿನಿಧಿ ಯಶೋದ ಕೇಂದ್ರದ ವಾರ್ಷಿಕ ವರದಿ ವಾಚಿಸಿದರು.ಗುಲಾಬಿ ವಂದಿಸಿ,ಸುಮಲತಾ ಕಾರ್ಯಕ್ರಮ ನಿರೂಪಿಸಿದರು,ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸಿದರು.