ದಲಿತ ವಿರೋಧಿ ಸಚಿವ ಸುಧಾಕರ್ ರಾಜೀನಾಮೆಗೆ ಅಮ್ಟೂರು ಆಗ್ರಹ
ಬಂಟ್ವಾಳ: ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿರುವ ದಲಿತ ವಿರೋಧಿ ಸಚಿವ ಡಿ.ಸುಧಾಕರ್ ರವರ ರಾಜೀನಾಮೆಯನ್ನು ಪಡೆದು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು ಆಗ್ರಹಿಸಿದ್ದಾರೆ.
ಸಚಿವ ಡಿ.ಸುಧಾಕರ್ ರವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದ್ದರೂ ಇದುವರೆಗೂ ಅವರ ರಾಜೀನಾಮೆ ಪಡೆಯದೆ ಇರುವುದು ಸರ್ಕಾರದ ಇಬ್ಬಗೆ ನೀತಿಯನ್ನುತೋರಿಸುತ್ತದೆ ಮತ್ತು ಈ ಸರ್ಕಾರದಲ್ಲಿ ದಲಿತರ ಪ್ರಾಣ, ಮಾನಗಳಿಗೆ ಬೆಲೆ ಇಲ್ಲವೆಂಬುದು ಕೂಡ ಖಚಿತವಾದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೊರ್ವ ಸಚಿವರಾದ ಎನ್.ಎಸ್. ಮಲ್ಲಿಕಾರ್ಜುನ್ ಸಾರ್ವಜನಿಕವಾಗಿ ಹೊಲಗೇರಿ ಎಂಬ ಜಾತಿ ನಿಂದಕ ಪದವನ್ನು ಬಳಸಿದ್ದರು, ಈಗ ಸಚಿವ ಡಿ.ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಎಸಗಿ ಪ್ರಾಣಬೆದರಿಕೆ ಒಡ್ಡಿದ್ದಾರೆ.ಇವರಿಬ್ಬರು ಸಚಿವ ಸಂಪುಟದಲ್ಲಿ ಉಳಿಯಬಹುದಾದರೆ ಇಂಥ ಸರ್ಕಾರದಿಂದ ದಲಿತರ ರಕ್ಷಣೆ ಸಾಧ್ಯವೇ ಎಂದು ತಿಳಿಸಿರುವ ಅವರು ಎಸ್.ಸಿ.,ಎಸ್.ಟಿ.ಮೀಸಲು ಅನುದಾನವನ್ನು ತಮ್ಮ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವ ಈ ಸರ್ಕಾರದಿಂದ ಪರಿಶಿಷ್ಟ ಜಾತಿಯವರ ಅಭಿವೃದ್ಧಿ ಸಾಧ್ಯವೇ? ಇಂತಹ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರವು ಈ ರಾಜ್ಯಕ್ಕೆ ಬೇಕಾಗಿದೆಯೇ ಎಂದು ದಿನೇಶ್ ಅಮ್ಟೂರು ಪ್ರಶ್ನಿಸಿದ್ದಾರೆ.