ಸವಿತಾ ಸೌಹರ್ದ ಸಹಕಾರಿ ನಿಯಮಿತ ವಾರ್ಷಿಕ ಮಹಾಸಭೆ
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸವಿತಾ ಸೌಹಾರ್ದ ಸಹಕಾರಿಯ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯು ಸಹಕಾರಿಯ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆಯಿತು.
ಬಳಿಕ ಮಾತನಾಡಿ ಅವರು, ಸಹಕಾರಿಯು ವರದಿ ಸಾಲಿನಲ್ಲಿ ೪೬.೮೧ ಕೋ.ರೂ. ವ್ಯವಹಾರ ನಡೆಸಿದ್ದು, ೨೭.೫೮ ಲಕ್ಷ ರೂ. ಲಾಭಗಳಿಸಿದೆ. ಸದಸ್ಯರಿಗೆ ೧೩ ಶೇ. ಡಿವಿಡೆಂಡ್ ನೀಡುವುದಾಗಿ ಘೋಷಿಸುತ್ತಿದ್ದೇವೆ. ಸಹಕಾರಿಯು ಗಟ್ಟಿಯಾಗಿ ನಿಲ್ಲುವಲ್ಲಿ ಆಡಳಿತ ಮಂಡಳಿ, ಸಿಬ್ಬಂದಿಯ ಶ್ರಮ, ಸದಸ್ಯರ ಸಹಕಾರವಿದ್ದು, ಸೆಲೂನ್ ಉತ್ಪನ್ನಗಳ ಮಾರಾಟ ಮಳಿಗೆಯು ಲಾಭ ಗಳಿಕೆಯ ಉದ್ದೇಶವನ್ನು ಹೊಂದಿಲ್ಲ. ಸಮಾಜದ ಬಂಧುಗಳ ಸೇವೆಗಾಗಿ ಅದು ಕಾರ್ಯಾಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಎಲ್ಲಾ ತಾಲೂಕುಗಳಿಗೂ ವಿಸ್ತರಣೆ ಮಾಡುವ ಆಲೋಚನೆ ಇದೆ. ಜತೆಗೆ ಸದಸ್ಯರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಮುಂದೆ ವಿದ್ಯಾರ್ಥಿ ವೇತನವನ್ನೂ ನೀಡಲಿದ್ದೇವೆ ಎಂದರು.
ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕಿನ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಮಾತನಾಡಿ, ಸಹಕಾರಿಯು ಲಾಭದ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಇರಿಸಿದಾಗ ಹೆಚ್ಚಿನ ಯಶಸ್ಸು ಸಿಗಲು ಸಾಧ್ಯವಿದ್ದು, ಬಜೆಟ್ ಮೀರದ ವ್ಯವಹಾರ ಆರ್ಥಿಕ ಶಿಸ್ತನ್ನು ತೋರಿಸುತ್ತಿದೆ. ಮುಂದೆ ಎಲ್ಲಾ ಶಾಖೆಗಳಿಗೂ ಸ್ವಂತ ಕಚೇರಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದರು.
ದ.ಕ.ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು ಮಾತನಾಡಿ, ನಮ್ಮದು ಸಣ್ಣ ಸಮಾಜದ ಸಹಕಾರಿಯಾದರೂ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿರುವ ಹೆಮ್ಮೆ ಇದೆ. ಕಳೆದ ೨ ವರ್ಷಗಳಲ್ಲಿ ಶಾಖೆಗಳನ್ನು ತೆರೆಯುವ ಪ್ರಯತ್ನ ನಡೆದಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಿದ್ದೇವೆ ಎಂದರು.
ಸಹಕಾರಿಯ ನಿರ್ದೇಶಕರಾದ ಮೋಹನ್ ಭಂಡಾರಿ ಪೊಯಿತ್ತಾಜೆ, ಭುಜಂಗ ಸಾಲ್ಯಾನ್ ಬಿ.ಸಿ.ರೋಡು, ಎಸ್.ರವಿ ಮಡಂತ್ಯಾರು, ಪದ್ಮನಾಭ ಭಂಡಾರಿ ಸುಳ್ಯ, ಸುಮಲತಾ ಭಂಡಾರಿ ಪುತ್ತೂರು, ರವೀಂದ್ರ ಭಂಡಾರಿ ಕೃಷ್ಣಾಪುರ, ಆಶಾ ಕಂದಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿಯ ಸವಿತಾಸ್ ಬ್ಯೂಟಿ ಕಾರ್ನರ್ ಮಳಿಗೆಯಲ್ಲಿ ಹೆಚ್ಚಿನ ವ್ಯವಹಾರ ಮಾಡಿದ ಗ್ರಾಹಕರಾದ ಶ್ರೀನಿವಾಸ ಭಂಡಾರಿ, ಭುಜಂಗ ಸಾಲ್ಯಾನ್, ಅರ್ಜುನ್ ಹಡಪದ, ಪ್ರವೀಣ್ ಭಂಡಾರಿ ಪುತ್ತೂರು ಅವರನ್ನು ಸಮ್ಮಾನಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶನ್ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ನಿರ್ದೇಶಕ ದಿನೇಶ್ ಎಲ್.ಬಂಗೇರ ಸ್ವಾಗತಿಸಿದರು. ನಿರ್ದೇಶಕ ವಸಂತ ಎಂ.ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ಶಾಖಾ ವ್ಯವಸ್ಥಾಪಕ ಪ್ರಸಾದ್ ಸಹಕರಿಸಿದರು.