ಜಕ್ರಿಬೆಟ್ಟುವಿನಲ್ಲಿ ಸಂಪರ್ಕ ಸೇತುವೆ ಸಹಿತ ಅಣೆಕಟ್ಟುವಿನ ಕಾಮಗಾರಿ ವೀಕ್ಷಿಸಿದ ಸಚಿವ ಭೋಸರಾಜು
ಬಂಟ್ವಾಳ: ಇಲ್ಲಿಗೆ ಸಮೀಪದ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಪರ್ಕ ಸೇತುವೆ ಸಹಿತ ಅಣೆಕಟ್ಟುವಿನ ಕಾಮಗಾರಿಯನ್ನು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಶನಿವಾರ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಬಿ.ಸಿ.ರೋಡು- ಬೆಳ್ತಂಗಡಿ ಹೆದ್ದಾರಿಯನ್ನು ಸಂಪರ್ಕಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕಾಗಿ ಎರಡು ತುದಿಗಳಲ್ಲಿಯ ಜಮೀನನ್ನು ಸ್ವಾಧೀನ ಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳಿದ್ದರೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆಯು ತಿಳಿಸಿದರು.
ಸ್ಥಳೀಯ ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರು ಅವರು ಈ ಅಣೆಕಟ್ಟು ಮತ್ತು ಸಂಪರ್ಕ ಸೇತುವೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ.ಅಂರ್ತಜಲವು ವೃದ್ಧಿಯಾಗುತ್ತಿದೆಯಲ್ಲದೆ ಸಂಪರ್ಕಸೇತುವೆಯ ಇನ್ನೊಂದು ಭಾಗದಲ್ಲಿ ನರಿಕೊಂಬು ಗ್ರಾಮವನ್ನು ಸಂಪರ್ಕಿಸಿ ಮಂಗಳೂರು-ಬೆಂಗಳೂರು ಹೆದ್ದಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಸದ್ಯ ಸಂಪರ್ಕಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ.ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ರೈ,ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,ಮಾಜಿ ತಾಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ,ಮಾಜಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಪುರಸಭಾ ಸದಸ್ಯ ಲೋಲಾಕ್ಷ, ಮಧುಸೂಧನ್ ಶೆಣೈ,ಸುಧಾಕರ ಶೆಣೈ ಖಂಡಿಗ,ಜಗದೀಶ್ ಕುಂದರ್,ನಾರಾಯಣ ನಾಯ್ಕ್,ಎಂ.ಎ.ಗಫೂರ್ ಹಾಗೂ ಸಣ್ಣ ನೀರಾವರಿ ಇಲಾಖಾಧಿಕಾರಿಗಳು ಹಾಜರಿದ್ದರು.