ಕೆಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಸಚಿವ ಬೋಸರಾಜು
ಬಂಟ್ವಾಳ: ಕರ್ನಾಟಕ ಸರಕಾರದ ಸಣ್ಣ ನೀರಾವರಿ ಸಚಿವರಾದ ಬೋಸರಾಜು ಅವರು ಶನಿವಾರ ಕೆಂದ್ರದ ಮಾಜಿ ಸಚಿವ,ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೋಸರಾಜು,ಜನಾರ್ದನ ಪೂಜಾರಿ ಮತ್ತು ತಮ್ಮ ಹಳೆಯ ಕಾಲದ ನಂಟು ಹಾಗೂ ಅವರ ಮಾರ್ಗದರ್ಶನದಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿರುವುದನ್ನು ಮೆಲುಕು ಹಾಕಿದರಲ್ಲದೆ ಪಕ್ಷದ ಸಂಘಟನೆಯ ವಿಚಾರದಲ್ಲಿ ಜನಾರ್ದನ ಪೂಜಾರಿ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ ಎಂದರು.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ನ ಹಿರಿಯ ನೇತಾರರಾದ ಜನಾರ್ದನ ಪೂಜಾರಿ ಹಾಗೂ ದಿವಂಗತ ಆಸ್ಕರ್ ಫೆರ್ನಾಂಡೀಸ್ ಅವರು ಪಕ್ಷದ ಬೆಳವಣಿಗೆಗೆ ಪಟ್ಟಿರುವ ಪರಿಶ್ರಮ,ಪಕ್ಷದೊಂದಿಗಿನ ಅವರ ನಿಷ್ಠೆ,ಪ್ರಾಮಾಣಿಕತೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇವೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪೂಜಾರಿಯವರು ಮಾಡಿರುವ ಸಾಧನೆ ಇಂದಿಗೂ ಅಚ್ಚಳಿಯದೆ ಉಳಿದಿದ್ದು,ಕಾಂಗ್ರೆಸ್ ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ರೈ, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,ಮಾಜಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ,ಮಾಜಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್,ಪುರಸಭಾ ಸದಸ್ಯ ಲೋಲಾಕ್ಷ,ಮಧುಸೂಧನ್ ಶೆಣೈ,ಸುಧಾಕರ ಶೆಣೈ ಖಂಡಿಗ,ಜಗದೀಶ್ ಕುಂದರ್,ನಾರಾಯಣ ನಾಯ್ಕ್,ಎಂ.ಎ.ಗಫೂರ್ ಮೊದಲಾದವರಿದ್ದರು.