ಅಮ್ಟೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ
ಬಂಟ್ವಾಳ: ಅಮ್ಟೂರು ಶ್ರೀಕೃಷ್ಣ ಮಂದಿರ,ನವಜ್ಯೋತಿ ಮಿತ್ರ ಮಂಡಳಿ ಅಮ್ಟೂರು ಹಾಗೂ ಜ್ಯೋತಿ ಮಹಿಳಾ ಮಂಡಲ ಅಮ್ಟೂರು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ೩೭ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯಿತು.ಮಂದಿರದ ಅರ್ಚಕರಾದ ಮೋಹನ ಆಚಾರ‍್ಯ ಅವರು ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿದರು.
ಪ್ರಪ್ರಥಮ ಬಾರಿಗೆ ಮಧ್ಯಾಹ್ನದ ನಂತರ ಅಮ್ಟೂರಿನ ವಿವಿಧ ರಸ್ತೆಗಳಲ್ಲಿ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆ ನಡೆಯಿತು.ಶೋಭಾಯಾತ್ರೆಯಲ್ಲಿ ವಿವಿಧ ರೀತಿಯ ಟ್ಯಾಬ್ಲೋಗಳು, ಭಜನೆ, ಕುಣಿತ ಭಜನೆ,ಚೆಂಡೆ,ನಾಸಿಕ್ ಬ್ಯಾಂಡ್‌ಗಳ ವಾದನಗಳು ಹಾಗೂ ಪುಟಾಣಿಗಳ ಕೃಷ್ಣ-ರಾಧೆ ವೇಷಧಾರಿಗಳು ಶೋಭಾಯಾತ್ರೆಯಲ್ಲಿ ಕೃಷ್ಣಲೋಕ ಆಕರ್ಷಣೀಯವಾಗಿತ್ತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರವಾರ ಅಣು ವಿದ್ಯುತ್ ಸ್ಥಾವರದ ನಿವೃತ್ತ ಅಧಿಕಾರಿ ದಿವಾಕರ ಅಮ್ಟೂರು ಪಡೀಲ್ ಅವರು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮಂದಿರದ ಅಧ್ಯಕ್ಷ ರಮೇಶ್ ಕರಿಂಗಾಣ ಉಪಸ್ಥಿತರಿದ್ದರು.ಅತಿಥಿಯಾಗಿ ಆಗಮಿಸಿದ ಗೋಳ್ತಮಜಲು ಗ್ರಾಮ ಪಂಚಾಯತ್‌ನ ಪಂಚಾಯತ್ ಅಧಿಕಾರಿ ವಿಜಯಶಂಕರ ಆಳ್ವ ಮಿತ್ತಳಿಕೆ ಅವರು ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಮತ್ತು ಮೊಸರು ಕುಡಿಕೆ ಉತ್ಸವದ ಬಗ್ಗೆ ಮಾತನಾಡಿದರು. ಮಂದಿರದ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಸ್ವಾಗತಿಸಿದರು,ಮಂದಿರದ ಉಪಾಧ್ಯಕ್ಷ ಕೌಶಿಲ್ ಶೆಟ್ಟಿ ವಂದಿಸಿದರು.