ಲೋಕಾರ್ಪಣೆಗಾಗಿ ಕಾಯುತ್ತಿದೆ ಬಿ.ಸಿ.ರೋಡಿನ “ಪಿಂಕ್ ಟಾಯ್ಲೆಟ್”
ಬಂಟ್ವಾಳ: ಸಾಕಷ್ಟು ಗೊಂದಲ ಮೂಡಿಸಿದ್ದ ಬಂಟ್ವಾಳ ಪುರಸಭೆಯ ವತಿಯಿಂದ ಬಿ.ಸಿ.ರೋಡ್ ನ ಆಡಳಿತ ಸೌಧದ ಗೇಟ್ ಪಕ್ಕದಲ್ಲೇ ಮಹಿಳೆಯರಿಗಾಗಿಯೇ ನಿರ್ಮಾಣಗೊಳ್ಳುತ್ತಿರುವ “ಪಿಂಕ್ ಶೌಚಾಲಯ”ದ(ಪಿಂಕ್ ಟಾಯ್ಲೆಟ್) ಕಾಮಗಾರಿ ಪೂರ್ಣಗೊಂಡಿದ್ದು,ಸದ್ಯ ಲೋಕಾರ್ಪಣೆಗೆ ಕಾಯುತ್ತಿದೆ.

ದ.ಕ.ಜಿಲ್ಲೆಯಲ್ಲಿಯೇ ಮೊದಲಿಗೆ ಬಿ.ಸಿ.ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಈ ಪಿಂಕ್ ಟಾಯ್ಲೆಟ್ ಕಾಮಗಾರಿಯ ಸಂದರ್ಭ ಹಲವು ಆಡೆ -ತಡೆ ಎದುರಿಸಬೇಕಾಯಿತು.ವಿಶೇಷವೆಂದರೆ ಇದರ ಕಾಮಗಾರಿ ನಿಲ್ಲಿಸಲು ವಾಮಾಚಾರ ಕೂಡ ನಡೆಸಲಾಗಿತ್ತು.ಇದಕ್ಕೆ ಪೂರಕವಾಗಿ ಕತ್ತರಿಸಲ್ಪಟ್ಟ ಕುಂಬಳಕಾಯಿ,ಕುಂಕುಮ ಎಲ್ಲವು ಪತ್ತೆಯಾಗಿತ್ತು.
ಇದರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತಾದರೂ,ಇದನ್ನು ಮಾಡಿದವರು ಯಾರು? ಹಿಂದಿನ ಕಾಣದ ಕೈ ಯಾರದು? ಪ್ರಕರಣ ಎನಾಗಿದೆ ಎಂಬುದು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ,ಇದಕ್ಕು ಮುನ್ನ ಈ ಶೌಚಾಲಯವು ಬಂಟ್ವಾಳ ಆಡಳಿತ ಸೌಧದ ಗೇಟಿನ ಪಕ್ಕವೇ ನಿರ್ಮಾಣವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಅವರು ಕಾಮಗಾರಿಗೆ ತಡೆ ನೀಡಿ ಆದೇಶಿದರು.ಬಳಿಕ ತಾಲೂಕು ಕಚೇರಿಗೆ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಅವರು ಕಾಮಗಾರಿಯ ಪರಿಶೀಲನೆಯನ್ನು ನಡೆಸಿದರು.ತದನಂತರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ತಡೆ ತೆರವುಗೊಂಡಿತ್ತು.
ಹೀಗೆ ಹಲವು ಗೊಂದಲಗಳಿಗೆ ಸಿಲುಕಿದ್ದ ಪಿಂಕ್ ಟಾಯ್ಲೆಟ್ ನ ಕಾಮಗಾರಿ ಕೊನೆಗೂ ಅಂತಿಮಗೊಂಡಿದೆ. ‘ಅಮೃತ ನಿರ್ಮಲ’ ನಗರ ಯೋಜನೆಯ ಮೂಲಕ ಬಂಟ್ವಾಳ ಪುರಸಭೆಗೆ ಮಂಜೂರಾದ 1ಕೋ.ರೂ. ಅನುದಾನದಲ್ಲಿ ಸುಮಾರು 25.50 ಲಕ್ಷ ರೂ. ವೆಚ್ಚದಲ್ಲಿ ಈ ಶೌಚಾಲಯವನ್ನು ನಿರ್ಮಿಸಲಾಗುತ್ತಿದೆ.
ಕೇವಲ ಶೌಚಾಲಯ ಅಲ್ಲ
ಕೇವಲ ಶೌಚಾಲಯ ಮಾತ್ರ ಇರುವುದಿಲ್ಲ,ಮಹಿಳೆಯರ ಹಲವು ಸಮಸ್ಯೆಗಳಿಗೆ ಅಲ್ಲಿ ಒಂದೇ ಸೂರಿನಡಿ ಪರಿಹಾರ ರೀತಿ ಕೆಲಸ ಮಾಡಲಿದೆ ಹಾಲುಣಿಸುವ ಮಕ್ಕಳಿರುವ ತಾಯಂದಿರು ನಗರಕ್ಕೆ ಆಗಮಿಸಿದರೆ ಅವರಿಗೆ ಹಾಲುಣಿಸುವ ಸರಿಯಾದ ವ್ಯವಸ್ಥೆ ಇರುವದಿಲ್ಲ ಅದಕ್ಕಾಗಿ ಇಲ್ಲಿ ಪ್ರತ್ಯೇಕವಾದ ಫೀಡಿಂಗ್ ಏರಿಯಾ ಇರುತ್ತದೆ. ಜತೆಗೆ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ,ಪ್ಯಾನಿಟರಿ ನ್ಯಾಪ್ಕಿನ್ ವ್ಯವಸ್ಥೆಯೂ ಒಳಗೊಂಡಿರುತ್ತದೆ.
ಶೌಚಾಲಯ ಅನುಷ್ಠಾನಗೊಳ್ಳುತ್ತಿರುವ ಸ್ಥಳದ ಪಕ್ಕದಲ್ಲೆ ತಾಲೂಕು ಕಚೇರಿ,ನ್ಯಾಯಾಲಯ ಸೇರಿದಂತೆ ಹಲವಾರು ಸರಕಾರಿ ಕಚೇರಿಗಳು ಇದ್ದು,ಅಲ್ಲಿಗೆ ಆಗಮಿಸುವ ಮಹಿಳೆಯರಿಗೆ ಈ ಶೌಚಾಲಯ ಅನುಕೂಲವಾಗಲಿದೆ.ಪ್ರಸ್ತುತ ಕಾಮಗಾರಿ ಪೂರ್ಣಗೊಂಡರೂ, ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ಉದ್ಘಾಟನೆಗೆ ಕಾಯಬೇಕಾಗಬಹುದು ಎಂದು ಪ್ರಕಟಣೆ ತಿಳಿಸಿದೆ.