ಹಿರಿಯ ರಂಗನಿರ್ದೇಶಕ ಮಂಜು ವಿಟ್ಲ ಇನ್ನಿಲ್ಲ
ಬಂಟ್ವಾಳ: ಪಂಚಾಯತ್ ರಾಜ್ ನ ರಾಷ್ಟ್ರೀಯ ತರಬೇತುದಾರ,ಹಿರಿಯ ರಂಗಕರ್ಮಿ,ರಂಗನಿರ್ದೇಶಕ ಮಂಜು ವಿಟ್ಲರವರು (77) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕುಂಟಿಕಾನದಲ್ಲಿರುವ ತಮ್ಮ ಪುತ್ರಿ ಮನೆಯಲ್ಲಿ ಬುಧವಾರ ನಿಧನರಾಗಿದ್ದಾರೆ.
ಧಾರ್ಮಿಕ ,ಸಾಮಾಜಿಕ,ವ್ಯಕ್ತಿತ್ವ ವಿಕಸನ,ಮಹಿಳಾ ಸಬಲೀಕರಣ,ನಾಟಕ,ರೂಪಕ,ವರ್ಣಾಲಂಕಾರ,ರಂಗಸಜ್ಜಿಕೆ ಹೀಗೆ ಯಾವುದೇ ಚಟುವಟಿಕೆಯಿರಲಿ ಮಂಜುವಿಟ್ಲ ಅವರದ್ದು ಎತ್ತಿದ ಕೈ.
ಬಿ.ಸಿ.ರೋಡು ಪರಿಸರ ಮತ್ತು ಅವರ ಆಪ್ತವಲಯದಲ್ಲಿ “ಮಂಜಣ್ಣ” ಎಂದೇ ಚಿರಪರಿಚಿತರಾಗಿದ್ದ ಅವರು ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿಯು ಗುರುತಿಸಿಕೊಂಡಿದ್ದರಲ್ಲದೆ ಹಿರಿಯ ಚಿತ್ರಕಲಾವಿದರಾಗಿ,ಕಾರ್ಯಕ್ರಮ ನಿರೂಪಕನಾಗಿ,ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು.
ಮೂಲತ: ವಿಟ್ಲ ನಿವಾಸಿಯಾಗಿದ್ದ ಅವರು ಬಿ.ಸಿ.ರೋಡಿನಲ್ಲಿ ವಾಸ್ತವ್ಯವಿದ್ದು,ಅನಾರೋಗ್ಯದ ಹಿನ್ನಲೆಯಲ್ಲಿ ಇತ್ತೀಚಿಗಿನ ಕೆಲ ಸಮಯದಿಂದ ಮಂಗಳೂರಿನ ಕುಂಟಿಕಾನದಲ್ಲಿರುವ ತನ್ನ ಏಕೈಕ ಪುತ್ರಿಯ ಮನೆಯಲ್ಲಿದ್ದರು.
ಸದಾ ನಗುಮುಖದ ಸರಳ,ಸ್ನೇಹಜೀವಿಯಾಗಿದ್ದ ಅವರು ಹಲವಾರು ತುಳು,ಕನ್ನಡ,ಪೌರಾಣಿಕ ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಲ್ಲದೆ 1000 ಕ್ಕು ಮಿಕ್ಕಿ ನಾಟಕಗಳಿಗೆ ನಿರ್ದೇಶನವಿತ್ತಿದ್ದಾರೆ .
ವಿಟ್ಲದ ಶಾಲೆಯೊಂದರ ರಂಗಮಂದಿರದಲ್ಲಿ ನಡೆದ “ಚೋಮನದುಡಿ” ನಾಟಕದಲ್ಲಿ ಚೋಮನ ಪಾತ್ರದಲ್ಲಿ ಮಂಜುವಿಟ್ಲ ಮಿಂಚಿದ್ದರು.ಆಗ ಈ ನಾಟಕ ವ್ಯಾಪಕ ಜನಪ್ರಿಯತೆಯನ್ನು ಪಡೆದಿತ್ತು.
ಕಲಾಮಾತೆಯ ಅಪ್ಪಟ ಕೂಸಾಗಿದ್ದ ಮಂಜುವಿಟ್ಲ ಅವರು ಹಲವು ಮಂದಿ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಲ್ಲದೆ ಕಿರಿಯ ಕಲಾವಿದರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಅವರ ದೊಡ್ಡ ಗುಣವಾಗಿತ್ತು.ಪಂಚಾಯತ್ ರಾಜ್ ನ ರಾಷ್ಟ್ರೀಯ ತರಬೇತುದಾರರಾಗಿ ಪ್ರತಿ ಪಂಚಾಯತ್ ಗೂ ಭೇಟಿ ನೀಡುತ್ತಿದ್ದರಲ್ಲದೆ ಗ್ರಾಮಸಭೆಗಳಲ್ಲು ಭಾಗವಹಿಸಿ ಗ್ರಾಮಸ್ಥರ ಪ್ರಶ್ನೆಗಳಿಗೂ ಉತ್ತರಿಸುವ ಮೂಲಕ ಯಶಸ್ವಿಯಾಗಿ ನಡೆಸಿಕೊಡುತ್ತಿದ್ದರು.
ಮೃತರು ಪುತ್ರಿ,ಅಳಿಯ,ಸಹೋದರ,ಸಹೋದರಿಯರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಜಿ ಸಚಿವ ರಮಾನಾಥ ರೈ,ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜಾ,ಬಂಟ್ವಾಳ ತುಳು ಒಕ್ಕೂಟದ ಅಧ್ಯಕ್ಷ ಸುದರ್ಶನ್ ಜೈನ್,ಪ್ರ.ಕಾರ್ಯದರ್ಶಿ ಎಚ್.ಕೆ.ನಯನಾಡು,ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ್ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.