ಕಾರಣಿಕ ಕ್ಷೇತ್ರ ಕೊಂದೊಡಿ ಗಡುಸ್ಥಳ ಜೀರ್ಣೋದ್ದಾರಕ್ಕೆ ಶಿಲಾನ್ಯಾಸ
ಕೈಕಂಬ: ಮಂಗಳೂರು ತಾಲೂಕಿನ ಎಡಪದವು ಕೊಂದೋಡಿ ವ್ಯಾಘ್ರ ಚಾಮುಂಡಿ ದೈವದ ಗಡುಸ್ಥಳದಲ್ಲಿ ನಿರ್ಮಾಣವಾಗಲಿರುವ ನೂತನ ಶಿಲಾಮಯ ದೈವಸ್ಥಾನದ ಶಿಲಾನ್ಯಾಸ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ಕ್ಷೇತ್ರದ ಅರ್ಚಕ ಕೃಷ್ಣ ಅಸ್ರಣ್ಣ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.

ಶಿಲಾನ್ಯಾಸ ನೆರವೇರಿಸಿ,ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ,ತುಳುನಾಡಿನ ಕಾರಣಿಕ ದೈವಗಳ ದೈವಸ್ಥಾನಗಳ ಜೀರ್ಣೋದ್ದಾರ ಕಾರ್ಯದಲ್ಲಿ ಪಾಲು ಪಡೆಯುವುದು ಪುಣ್ಯದ ಫಲವಾಗಿದೆ. ಕೆಲವೇ ಜನರ ದುಡ್ಡಿನಿಂದ ದೈವಸ್ಥಾನ ನಿರ್ಮಾಣ ಆಗಬಾರದು,ದೈವಸ್ಥಾನ ಊರಿಗೆ ಸೇರಿದ್ದು ಆದುದರಿಂದ ಊರಿನ ಪ್ರತಿಯೊಬ್ಬರ ದೇಣಿಗೆ ಹಾಗೂ ಸೇವೆಯಿಂದ ವ್ಯಾಘ್ರ ಚಾಮುಂಡಿ ದೈವದ ನೂತನ ಶಿಲಾಮಯ ದೈವಸ್ಥಾನ ನಿರ್ಮಾಣವಾಗಬೇಕು.ಈ ಪುಣ್ಯ ಕಾರ್ಯದಲ್ಲಿ ಎಲ್ಲರಂತೆ ಸಾಮಾನ್ಯನಾಗಿ ನಿಮ್ಮೊಂದಿಗೆ ನನ್ನಿಂದ ಸಾಧ್ಯವಿರುವಷ್ಟು ಸೇವೆಯನ್ನು ಸಲ್ಲಿಸುತ್ತೇನೆ ಅಲ್ಲದೇ ವ್ಯಾಘ್ರ ಚಾಮುಂಡಿಯ ಅನುಗ್ರಹದಿಂದ ಅಪಾರ ಭಕ್ತವೃಂದದ ಒಗ್ಗೂಡುವಿಕೆಯಿಂದ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದರು.

ಇದೇ ವೇಳೆ ವಿಜ್ಞಾಪನಾ ಪತ್ರವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಸುರೇಶ್ ಬಲ್ಲಾಳ್ ಅಧ್ಯಕ್ಷತೆಯ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಅಂದಾಜು ೩೦ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಶಿಲಾಮಯ ದೈವಸ್ಥಾನ,ಮಹಮ್ಮಾಯಿ ಕಟ್ಟೆ,ಬಾವಿ ನಿರ್ಮಾಣ ಸಹಿತ ಕ್ಷೇತ್ರದ ಸಂಪೂರ್ಣ ಜೀರ್ಣೋದ್ದಾರ ಕಾರ್ಯ ನಡೆಯಲಿದೆ.
ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ನ ನಿವೃತ್ತ ಸೀನಿಯರ್ ಡಿವಿಜನ್ ಮ್ಯಾನೇಜರ್ ವಿ.ಪಿ. ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ವಿಜಯ ಗೌಡ ಶಿಬ್ರಿಕೆರೆ,ಗೋಪಾಲ ಕಾರಂತ,ಶ್ರೀನಿವಾಸ ರಾವ್ ಅಗರಿ,ಗೋಪಾಲ ಗೌಡ, ಅಶೋಕ್ ಆಚರ‍್ಯ,ಪ್ರವೀಣ್ ಆಳ್ವ ಗುಂಡ್ಯ,ಮಾಧವ ಶೆಣೈ,ಬಾಲಕೃಷ್ಣ ನಾಯಕ್,ರಘುಪತಿ ಶೆಣೈ,ಗಂಗಾಧರ್ ಪೂಜಾರಿ,ಅನಸೂಯ,ಐ. ಕೃಷ್ಣ ಅಸ್ರಣ್ಣ,ಜಯರಾಮ್ ಸನಿಲ್ ಹಾಗೂ ಶಿಲ್ಪಿ ಧನಶೇಖರ್ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಪುರಂದರ ನಾಯ್ಕ್,ಸುಂದರ ನಾಯ್ಕ್,ನಿತ್ಯಾನಂದ ನಾಯ್ಕ್,ವೆಂಕಪ್ಪ ನಾಯ್ಕ್ ಮತ್ತು ಸದಸ್ಯರು ಪಾಲ್ಗೊಂಡಿದ್ದರು.ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಸುದರ್ಶನ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಗುಣಪಾಲ್ ವಂದಿಸಿದರು.ಕುಮಾರಿ ಶ್ರಾವ್ಯ ಮತ್ತು ಕುಮಾರಿ ನಿರೀಕ್ಷಿತಾ ನಿರೂಪಿಸಿದರು.