ಬಂಟ್ವಾಳ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ವಾರ್ಷಿಕ ಕಾರ್ಯ ಚಟುವಟಿಕೆ ಚಾಲನೆ
ಬಂಟ್ವಾಳ: ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು,ವಿದ್ಯಾರ್ಥಿಯಾದವನಿಗೆ ಏಕಾಗ್ರತೆಯೊಂದಿಗೆ ಗುರಿ ಹಾಗೂ ಉದ್ದೇಶಗಳಿರಬೇಕು.ಶ್ರಮದ ಮಹತ್ವ ಹಾಗೂ ಹಿರಿಯರನ್ನು ಗೌರವಿಸುವುದನ್ನು ಅರಿತುಕೊಂಡು ತಮ್ಮ ವ್ಯಕ್ತಿತ್ವವನ್ನು ನಾವೇ ಬೆಳೆಸುವುದರ ಜತೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಎಂದು ನಿವೃತ್ತ ಜಿಲ್ಲಾ ಮಲೇರಿಯಾ ಪರಿವೀಕ್ಷಕ ಜಯರಾಮ ಪೂಜಾರಿ ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕ ೨೦೨೩-೨೪ರ ವಾರ್ಷಿಕ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕೇವಲ ಮಣ್ಣು ಹೊರುವ ಕೆಲಸ ಮಾತ್ರವಲ್ಲ ಅದು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಉತ್ತೇಜನ ನೀಡುತ್ತದೆ.ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಒದಗಿಸಿಕೊಡುತ್ತದೆ.ದೇಹ ಮನಸ್ಸು ಸ್ವಚ್ಚತೆ ವ್ಯಕ್ತಿಯ ಮಾನಸಿಕ ಸ್ಥೈರ್ಯ ತುಂಬಿ ಹೊಂದಾಣಿಕೆ ಮನೋಭಾವವನ್ನು ಬೆಳೆಸುತ್ತದೆ.ನಾಯಕತ್ವದ ಗುಣ, ಏಕತೆ, ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಜೀವನ ಮೌಲ್ಯಗಳ ಜತೆ ಅರೋಗ್ಯದ ಕಡೆ ಹೆಚ್ಚಿನ ಒತ್ತು ಕೊಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎಸ್.ವಿ.ಎಸ್. ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಲಕ್ಷ್ಮೀನಾರಾಯಣ ಕೆ. ,ಎನ್.ಎಸ್.ಎಸ್. ಘಟಕ ನಾಯಕರಾದ ನಾಯಕ ಪವನ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಶಶಿಧರ್ ಎಸ್. ೨೦೨೩-೨೪ನೇ ಸಾಲಿನ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಎನ್.ಎಸ್.ಎಸ್. ಸ್ವಯಂ ಸೇವಕರು ಎನ್.ಎಸ್.ಎಸ್. ಗೀತೆಯನ್ನು ಹಾಡಿದರು. ಎನ್.ಎಸ್.ಎಸ್. ಘಟಕ ನಾಯಕಿ ಕೀರ್ತನಾ ಸ್ವಾಗತಿಸಿ, ಎನ್.ಎಸ್.ಎಸ್. ಸ್ವಯಂ ಸೇವಕಿ ಧನ್ಯಶ್ರೀ ವಂದಿಸಿದರು. ಸ್ವಯಂ ಸೇವಕ ಅಮಿತ್ ಕಾರ್ಯಕ್ರಮ ನಿರೂಪಿಸಿದರು.