“ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ‘ಫುದ್ದೋಟ್ಟು ಕೆರೆ’ಯ ಪುನಶ್ಚೇತನ
ಬಂಟ್ವಾಳ: ಮಾನವನ ವಿಪರೀತ ಆಸೆಗಾಗಿ ಪ್ರಕೃತಿ ಕೊಟ್ಟ ಕೊಡುಗೆಯನ್ನು ಉಳಿಸುವಲ್ಲಿ ವಿಫಲವಾಗಿ ಪ್ರಕೃತಿಯನ್ನೇ ನಾಶ ಮಾಡಿ ಅಂತರ್ಜಲದ ಮಟ್ಟ ಕಡಿಮೆ ಆಗಿರುವುದನ್ನು ಗಮನಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿ ಯೋಜನೆಯೇ “ನಮ್ಮೂರು ನಮ್ಮ ಕೆರೆ ” ಕಾರ್ಯಕ್ರಮ ಆಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆ,ಬಿ.ಸಿ ಟ್ರಸ್ಟ್( ರಿ) ಉಡುಪಿ ಇದರ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇ ಗೌಡ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ವಿಟ್ಲ ವತಿಯಿಂದ ಸಾಲೆತ್ತೂರು ವಲಯದ ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ “ಫುದ್ದೋಟ್ಟು ಕೆರೆ “ಯನ್ನು “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿಯಲ್ಲಿ ಹೂಳೆತ್ತಿ ಪುನಶ್ಚೇತನಗೊಳಿಸಿದ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಕೊಲ್ನಾಡು ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರ್ಚಕ ರಾಮಚಂದ್ರ ಭಟ್ ಕೊಲ್ನಾಡು ಅವರು ಗಂಗಾ ಪೂಜೆ ನೆರವೇರಿಸಿ ಬಾಗಿನ ಸಮರ್ಪಣೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.ಕೃಷ್ಣಯ್ಯ ಬಲ್ಲಾಲ್ ಅರಮನೆ ವಿಟ್ಲ ಕೆರೆಯ ಪಕ್ಕ ನಾಮಪಲಕ ಅನಾವರಣ ಗೊಳಿಸಿದರು.ಜನಜಾಗೃತಿ ವೇದಿಕೆಯ ಸದಸ್ಯರಾದ ದೇವಿದಾಸ ಶೆಟ್ಟಿ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫುದ್ದೋಟ್ಟು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ ವಹಿಸಿದ್ದರು.
ಕೊಲ್ನಾಡು ಗ್ರಾಮ ಪಂಚಾಯತಿಗೆ ಕೆರೆಯನ್ನು ಹಸ್ತಾಂತರಿಸಿದ ಯೋಜನೆಯ ಪುತ್ತೂರು ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾತನಾಡಿ ಡಾ.ಹೆಗ್ಗಡೆಯವರ ಅನುಗ್ರಹದಿಂದ ಸುಮಾರು 1,68,855 ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ “ಫುದ್ದೋಟ್ಟು ಕೆರೆ”ಯ ಪಾವಿತ್ರತೆ, ಸ್ವಚ್ಛತೆಯನ್ನು ಕಾಪಾಡಿಕೊಂಡು ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು, ಪಂಚಾಯತ್ ವತಿಯಿಂದ ವಿಶೇಷ ಅನುದಾನದ ಮೂಲಕ ಕೆರೆಯ ಸುತ್ತು ತಡೆಗೋಡೆ ಹಾಗೂ ಗಿಡಗಳ ನಾಟಿ ಮಾಡಿ ರಾಜ್ಯಕ್ಕೆ ಮಾದರಿ ಕೆರೆಯನ್ನಾಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಯೋಜನೆಯ ಜನಮಂಗಳ ಕಾರ್ಯಕ್ರಮದ ಸಲಕರಣೆಗಳನ್ನು ಹಾಗೂ ಸುಜ್ಞಾನ ನಿಧಿ ಮಂಜೂರಾತಿ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.
ವೇದಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಕೆ,ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ,ಕೊಲ್ನಾಡು ಪಂಚಾಯತ್ ಉಪಾಧ್ಯಕ್ಷ ಅಸ್ಮಾ,ಜನಜಾಗೃತಿ ವೇದಿಕೆಯ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷರಾದ ಕೆಯ್ಯೂರು ನಾರಾಯಣ ಭಟ್,ಯೋಜನೆಯ ಸಾಲೆತ್ತೂರು ವಲಯ ಅಧ್ಯಕ್ಷ ದಿನೇಶ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಸೀತಾರಾಮ್ ಮೊದಲಾದವರು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಪ್ರಮೀತಾ ಪ್ರಾರ್ಥಿಸಿ,ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿದರು, ವಲಯ ಮೇಲ್ವಿಚಾರಕಿ ಮೋಹಿನಿ ವಂದಿಸಿ,ಕೃಷಿ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.