ಮಜಿ ದ. ಕ. ಜಿ. ಪಂ. ಹಿ.ಪ್ರಾ. ಶಾಲೆಗೆ ಗಣಕಯಂತ್ರ , ಪ್ರಿಂಟರ್ ಹಸ್ತಾಂತರ
ಬಂಟ್ವಾಳ: ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಒಂದು ಶಾಲೆಯಲ್ಲಿ ನಡೆದಾಗ ಮಕ್ಕಳ ಭವಿಷ್ಯದ ಹಾದಿ ಒಳ್ಳೆಯ ಹಂತಕ್ಕೆ ಹೋಗುತ್ತದೆ, ಶಾಲೆಯಲ್ಲಿ ಗಣಕಯಂತ್ರದ ಅವಶ್ಯಕತೆಯನ್ನು ಮನಗಂಡು ಶಾಲಾ ಕಛೇರಿ ಕೆಲಸಗಳ ಅನುಕೂಲತೆಗಾಗಿ ಗಣಕಯಂತ್ರ ಹಾಗೂ ಪ್ರಿಂಟರ್ ಒದಗಿಸಲಾಗಿದೆ ಎಂದು ಟಾಟಾ ಕಂಪನಿ ಯ ಸುಧೀರ್ ಸಾಗರ್ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಗಣಕಯಂತ್ರ ಹಾಗೂ ಪ್ರಿಂಟರ್ ಹಸ್ತಾಂತರಿಸಿ ಅವರು ಮಾತನಾಡಿದರು.ಇದೇ ವೇಳೆ ಶಾಲೆಯಲ್ಲಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರು ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ತಾನು ದುಡಿಯುವ ಕಂಪನಿಯ ಮೂಲಕ ಒದಗಿಸುವುದಾಗಿ ಭರವಸೆಯಿತ್ತರು.
ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮಾಲಕರಾದ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಶಾಲೆಯ ಪರವಾಗಿ ಸುಧೀರ್ ಸಾಗರ್ ಅವರನ್ನು ಅಭಿನಂದಸಿದರು.
ವೇದಿಕೆಯಲ್ಲಿ ಶ್ರೀದೇವಿ ಕಂಷ್ಟ್ರಕ್ಷನ್ಸ್ ಮಾಲಕರಾದ ಸಂದೀಪ್ ಶೆಟ್ಟಿ ಅರೆಬೆಟ್ಟು,ಸುಧೀರ್ ಸಾಗರ್ ರವರ ಪುತ್ರ ಚಿರಾಗ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೊರಗಪ್ಪ ನಾಯಕ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ,ಸಹ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ ವಂದಿಸಿದರು.