ಪಡಿತರ ಚೀಟಿ ವಿತರಣೆ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಕೋರಿ ಮನವಿ
ಬಂಟ್ವಾಳ: ರಾಜ್ಯದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಹಾಗೂ ಪಡಿತರ ಚೀಟಿಗೆ ಹೆಸರು ಸೇರ್ಪಡೆ ಸಹಿತ ಕೆಲ ವಿಷಯಗಳು ಕೆಲ ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದು ಪಡಿತರ ಚೀಟಿ ಲಭ್ಯವಿಲ್ಲದೇ ರಾಜ್ಯದ ಹಲವು ಕುಟುಂಬಗಳು ಸರಕಾರದ ಕೆಲವೊಂದು ಯೋಜನೆಗಳ ಪ್ರಯೋಜನ ಪಡೆಯಲು ವಂಚಿತವಾಗಿದ್ದು,ಹೊಸ ಪಡಿತರ ಚೀಟಿ ವಿತರಣೆ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸುವಂತೆ ಬಂಟ್ವಾಳ ತಾ.ನ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯ ಸರಕಾರ ಪ್ರಕಟಿಸಿದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳಿಗೂ ಪಡಿತರ ಚೀಟಿಯನ್ನು ಪ್ರಮುಖ ಮಾನದಂಡವನ್ನಾಗಿರಿಸಿರುವುದರಿಂದ ಪಡಿತರ ಚೀಟಿಯಲ್ಲಿನ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
ಹೊಸದಾಗಿ ಬಿ. ಪಿ. ಎಲ್. ಪಡಿತರ ಚೀಟಿಗಾಗಿ ಅರ್ಜಿಗಳನ್ನು ಸಲ್ಲಿಸಿ ವರ್ಷವಾದರೂ ಇನ್ನೂ ಪಡಿತರ ಚೀಟಿ ವಿತರಣೆ ಆಗಿಲ್ಲ,
ಈಗಾಗಲೇ ಸರಕಾರ ರಚನೆಯಾಗಿ ಮೂರು ತಿಂಗಳಾದರೂ ಇನ್ನೂ ಪಡಿತರ ಚೀಟಿ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟಿಲ್ಲ ಎಂದುಪ್ರಭು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಹಾಗಾಗಿ ತಕ್ಷಣವೇ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಿದವರಿಗೆ ಬಿಪಿಲ್, ಎಪಿಲ್ ಪಡಿತರ ಚೀಟಿಗಳನ್ನು ವಿತರಿಸಬೇಕು ಹಾಗೂ ಪಡಿತರ ಚೀಟಿಗಳಿಗೆ ಹೆಸರು ಸೇರ್ಪಡೆ ಮತ್ತು ಮಾರ್ಪಡು ಮಾಡುವುದಕ್ಕೆ ಅನುವು ಮಾಡಿಕೊಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಬೆಳೆ ವಿಮೆ ಪ್ರೀಮಿಯಂ ಪಾವತಿ
ಅ. 7 ರವರೆಗೆ ವಿಸ್ತರಣೆ:
2023 – 24ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆಮತ್ತು ಕಾಳುಮೆಣಸು ಬೆಳೆಗಳಿಗೆ ಬೆಳೆ ವಿಮೆ ಪಾವತಿಸುವ ದಿನಾಂಕ ವನ್ನು ಅ. 7 ರವರೆಗೆ ಕೇಂದ್ರ ಸರಕಾರ ವಿಸ್ತರಣೆ ಮಾಡಿ ಆದೇಶ ಹೊರಡಿಸಿ ಬಾಕಿ ಉಳಿದ ರೈತರಿಗೆ ಅವಕಾಶ ಕಲ್ಪಿಕೊಟ್ಟಿದೆ ಎಂದು ಇದೇ ವೇಳೆ ಪ್ರಭಾಕರ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಕಿ ಉಳಿದಿರುವ ರೈತರು ವಿಮೆ ಕಂತನ್ನುಅ.7 ರೊಳಗೆ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯುವಂತೆಯು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಕೋರಿದ್ದಾರೆ.