ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ,
ಉಪಾಧ್ಯಕ್ಷ ಸ್ಥಾನಕ್ಕೆ ಆ. ೯ಕ್ಕೆ ಚುನಾವಣೆ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಆ. ೯ರಂದು ಮುಂದಿನ ಎರಡೂವರೆ ವರ್ಷದ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಪಂಚಾಯತ್‌ನ ಸಭಾಭವನದಲ್ಲಿ ಆ. ೨ರಂದು ಪಂಚಾಯತ್ ಆಡಳಿತ ಮತ್ತ ಸರ್ವ ಸದಸ್ಯರ ಸಮ್ಮುಖದಲ್ಲಿ ನಿರ್ಗಮನ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಮತ್ತು ಉಪಾಧ್ಯಕ್ಷೆ ದಿಲ್ಶಾದ್ ಅಡ್ಡೂರು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಪಂಚಾಯತ್ ಪಿಡಿಒ ಪಂಕಜಾ ಶೆಟ್ಟಿ ಅವರು ಸ್ವಾಗತಿಸಿ, ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯರ ಕಾರ್ಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಂಚಾಯತ್‌ನ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಶೋಕ್ ವಂದಿಸಿದರು.

ಪಂಚಾಯತ್ ಬಲಾಬಲ :
ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು ೨೮ ಸದಸ್ಯ ಬಲವಿದ್ದು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲತ ತಲಾ ೧೦ ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ೮ ಸದಸ್ಯ ಬಲವಿದೆ. ಪ್ರಸಕ್ತ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರಾಗಿ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯೆ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದಿನ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಸದಸ್ಯರಿಗೆ ಮೀಸಲಾಗಿದೆ.
ಕಳೆದ ಬಾರಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಂತೆ ಈ ಬಾರಿಯ ಚುನಾವಣೆಯೂ ಕುತೂಹಲಕಾರಿಯಾಗಿದೆ. ಆ. ೧೦, ೧೨ ಮತ್ತು ೧೭ರಂದು ಕ್ರಮವಾಗಿ ಕರಿಯಂಗಳ, ಕಂದಾವರ ಮತ್ತು ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.