ಬಿ.ಸಿ.ರೋಡಿನಲ್ಲಿ ದತ್ತಿ ಉಪನ್ಯಾಸ
ಬಂಟ್ವಾಳ: ಕಾದಂಬರಿಗಾರ್ತಿ ಗಂಗಾ ಪಾದೆಕಲ್ಲು ಅವರ ಮೌನರಾಗಗಳು ಕಾದಂಬರಿ ಸ್ತ್ರೀ ಯ ಬದುಕಿನ ನೈಜ ಚಿತ್ರಣವನ್ನು, ರೋಗ ರುಜಿನಗಳನ್ನು ಎದುರಿಸಿ ನಿಲ್ಲುವ ಧೈರ್ಯ ,ಸ್ಥೈರ್ಯವನ್ನು ನೀಡುತ್ತದೆ ಎಂದು ಕನ್ನಡ ಉಪನ್ಯಾಸಕಿ ಗೀತಾ ಕೊಂಕೋಡಿ ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನ ಕೈಕಂಜದಲ್ಲಿರುವ ಕನ್ನಡ ಭವನದಲ್ಲಿ ನಡೆದ ಡಾ.ಜಾನಕಿ ಸುಂದರೇಶ್ ಸ್ಥಾಪಿತ ಕಳಸ ಪುಟ್ಟ ದೇವರಯ್ಯ, ನಾಗಮ್ಮ ದತ್ತಿ ಉಪನ್ಯಾಸ ನೀಡಿ,ಪಾದೆಕಲ್ಲುರವರ ಕಾದಂಬರಿ ಅವಲೋಕಿಸಿ ಅವರು ಮಾತನಾಡಿದರು.
ಡಾ. ಮನಮೋಹನ್ ವಿಟ್ಲ ಸ್ಥಾಪಿತ ಪ್ರೊ. ಎಂ. ರಾಮಕೃಷ್ಣ ಭಟ್ ದತ್ತಿ ಉಪನ್ಯಾಸದಲ್ಲಿ ಯುವ ಕವಿ, ಕನ್ನಡ ಉಪನ್ಯಾಸಕ ರಮೇಶ್ ಮೆಲ್ಕಾರ್ ಸಂಸ್ಕೃತ – ಕನ್ನಡಗಳ ಕುರಿತಾಗಿ ಮಾತನಾಡಿ, ಸುಮಾರು ಐದು ಸಾವಿರ ವರ್ಷಗಳಿಗೂ ಮಿಕ್ಕಿ ಇತಿಹಾಸವಿರುವ ಸಂಗ್ರಹವು ಎಲ್ಲ ಭಾಷೆಗಳಿಗೂ ತಾಯಿ ಇದ್ದಂತೆ, ಕನ್ನಡಕ್ಕಂತೂ ಸಂಸ್ಕೃತ ಭಾಷಾ ಏರವಲು ಅನಿವಾರ್ಯವಾದುದು ಎಂದು ಹೇಳಿದರು.
ಬಂಟ್ವಾಳ ತಾ.ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ದತ್ತಿ ಉಪನ್ಯಾಸ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ, ಶ್ರೀನಾಥ್ ,ಬಂಟ್ವಾಳ ತಾಲೂಕು ಕಸಾಪ ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿ ವಿ.ಸು.ಭಟ್, ಗೌರವ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಡಿ.ಬಿ, ಮತ್ತಿತರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಎಂ.ಡಿ ಮಂಚಿ ಸ್ವಾಗತಿಸಿ, ನಿರೂಪಿಸಿದರು. ಕವಿಯತ್ರಿ ರಜನಿ ಚಿಕ್ಕಯ ಮಠ ವಂದಿಸಿದರು.