ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೆರೆ ಏರಿಕೆ ಹಲವೆಡೆ ಹಾನಿ, ಕೊಚ್ಚಿ ಹೋದ ಕಿರು ಕಿಂಡಿ ಅಣೆಕಟ್ಟೆ
ಬಂಟ್ವಾಳ:ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ಸೋಮವಾರ ಸಂಜೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 8.1ಕ್ಕೆ ಏರಿಕೆಯಾಗಿದೆ. ಇಲ್ಲಿನ ನದಿ ತೀರದ ಶಾಲಾ ಮಕ್ಕಳಿಗೆ ಸೋಮವಾರ ರಜೆ ನೀಡಲಾಗಿದ್ದು, ಪಾಣೆಮಂಗಳೂರು ಸಮೀಪದ ಆಲಡ್ಕ ಮತ್ತಿತರ ಕಡೆಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅವರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಮಣಿಹಳ್ಳ-ವಾಮದಪದವು ಮುಖ್ಯರಸ್ತೆಗೆ ಗುಡ್ಡದ ಮಣ್ಣು ಕುಸಿದು ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಮತ್ತಷ್ಟು ಮಣ್ಣು ಕುಸಿಯುವ ಭೀತಿ ಉಂಟಾಗಿದೆ.
ಇಲ್ಲಿನ ಉಳಿ ಗ್ರಾಮದ ಲಿಂಗೊಟ್ಟು ಎಂಬಲ್ಲಿ ತೋಡಿನ ನೆರೆ ನೀರಿನ ರಭಸಕ್ಕೆ ಕಿರು ಕಿಂಡಿ ಅಣೆಕಟ್ಟೆಯೊಂದರ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. ಇರ್ವತ್ತೂರು ನಿವಾಸಿ ವಿಶ್ವನಾಥ ಪೂಜಾರಿ ಎಂಬವರ ಮನೆ ಬಳಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದ್ದು, ಕರೋಪಾಡಿ ಗ್ರಾಮದ ಒಡಿಯೂರು ಅಂಗನವಾಡಿ ಕೇಂದ್ರದ ಆವರಣಗೋಡೆ ಕುಸಿದು ಬಿದ್ದಿದೆ. ವೀರಕಂಭ ಗ್ರಾಮದ ನಡುವಲಚ್ಚಿಲ್ ನಿವಾಸಿ ಆರತಿ ಸಂಜೀವ ಎಂಬವರ ಮನೆ ಕೂಡಾ ಹಾನಿಗೀಡಾಗಿದೆ.
ಇಲ್ಲಿನ ನೇತ್ರಾವತಿ ನದಿಯಲ್ಲಿ ಮತ್ತೆ ನೆರೆ ಏರಿಕೆ ಭೀತಿ ಎದುರಾಗಿದ್ದು, ಕಂದಾಯ ಇಲಾಖೆ ಸಹಿತ ಎಲ್ಲಾ ಅಧಿಕಾರಿಗಳು ಕೇಮದ್ರ ಸ್ಥಾನದಲ್ಲಿ ಇರುವಂತೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ.