ಬಂಟ್ವಾಳ:  ವಾರದ ಬಿಡುವಿನ ಬಳಿಕ ಬಂಟ್ವಾಳ ತಾಲೂಕಿನಲ್ಲಿ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ತಾಲೂಕಿನ ಜೀವ ನದಿ ನೇತ್ರಾವತಿಯಲ್ಲಿ ನೀರಿನ ಹರಿವು ಕೂಡಾ ಶನಿವಾರ  ಏರಿಕೆ ಕಂಡು ಬಂದಿದೆ.ಶುಕ್ರವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಯ ಹಿನ್ನಲೆಯಲ್ಲಿ ತಾಲೂಕಿನ ವಿವಿಧೆಡೆಯಲ್ಲಿ ಮಳೆ ಹಾನಿ ಪ್ರಕರಣಗಳು ದಾಖಲಾಗಿವೆ.


ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ನೇರಳಕಟ್ಟೆ  ಹಾಗೂ ಬಂಟ್ವಾಳ- ಮೂಡಬಿದ್ರೆ ರಸ್ತೆ ಯ ಲೊರೆಟ್ಟೋ ಪದವು ಎಂಬಲ್ಲಿ ರಸ್ತೆಗೆ ಮರ ಬಿದ್ದು ಕೆಲಹೊತ್ತುಗಳ ಕಾಲ  ವಾಹನ ಸಂಚಾರ ಅಸ್ತವ್ಯಸ್ತ ಉಂಟಾದ ಘಟನೆಯು ನಡೆದಿದೆ.  ಅರಣ್ಯ, ಮೆಸ್ಕಾಂ ಹಾಗೂ  ಅಗ್ನಿ ಶಾಮಕದಳದ  ಸಿಬ್ಬಂದಿಗಳು ಜಂಟಿಯಾಗಿ ರಸ್ತೆಗೆ ಬಿದ್ದ ಮರ ತೆರವು ಕಾರ್ಯ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


ವಿವಿಧೆಡೆ ಹಾನಿ:
ನರಿಕೊಂಬು ಗ್ರಾಮದ ನಿವಾಸಿ ಶಾರದಾ  ಅವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿದೆ. ವೀರಕಂಭ ಗ್ರಾಮದ ಮಜ್ಯೋನಿ ನಿವಾಸಿ ಭಾಗಿ ಅವರ ಕಚ್ಚಾ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕರಿಯಂಗಳ ಗ್ರಾಮದ ನಿವಾಸಿ ಮಾರಿಯಮ್ಮ ಅವರ ಮನೆಯ ಮೇಲ್ಪಾವಣಿ ಕುಸಿದು ಭಾಗಶಃ ಹಾನಿಯಾಗಿದೆ.ಅಮ್ಮುಂಜೆ ಗ್ರಾಮದ ನಿವಾಸಿ ಕೊರಗಪ್ಪ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ ಎಂದು‌ಬಂಟ್ವಾಳ ತಾಲೂಕು ಆಡಳಿತದ ಪ್ರಕಟಣೆ ತಿಳಿಸಿದೆ.


ಆದೇರೀತಿ ನರಿಕೊಂಬು ಗ್ರಾಮದ ಕರ್ಬೆಟ್ಟು ನಿವಾಸಿ ಬಾಬು ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿದೆ. ಕಳ್ಳಿಗೆ ಗ್ರಾಮದ ನಿವಾಸಿ ದಿವಾಕರ್ ಅವರ ಅಡಿಕೆ ಮರ ತುಂಡಾಗಿ ಬಿದ್ದಿರುತ್ತದೆ. ಈ ಬಗ್ಗೆ ತೋಟಗಾರಿಕಾ ಇಲಾಖೆಗೆ ಮಾಹಿತಿ ನೀಡಲಾಗಿದೆ. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ನಿವಾಸಿ ಶಿವರಾಮ ನಾಯಕ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ.


ನೆಟ್ಲಮುಡ್ನೂರು ಗ್ರಾಮದ ಏಮಾಜೆ ನಿವಾಸಿ ಹೊನ್ನಮ್ಮ ಅವರ ವಾಸ್ತವ್ಯದ ಮನೆಯಿಂದ ಪ್ರತ್ಯೇಕವಾಗಿ ಇರುವ ಕೊಟ್ಟಿಗೆ ಹಾನಿಯಾಗಿದೆ.
ವಿಟ್ಲ ಹೋಬಳಿಯ ವಿಟ್ಲ ಮುನ್ನೂರು ಗ್ರಾಮದ ಮೂಡಾಯಿಮಾರು ನಿವಾಸಿ ಸತೀಶ್  ಶೆಟ್ಟಿ ಅವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಅಳಿಕೆ-ಕಾನತ್ತಡ್ಕ ನಿವಾಸಿ ರಝಾಕ್ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಪುದು ಗ್ರಾಮದ ಸುಜೀರು- ಬದಿಗುಡ್ಡೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಮನೆ ಮಂದಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಬಡಗ ಬೆಳ್ಳೂರು ಗ್ರಾಮದ ಬಾಳಿಕೆ ನಿವಾಸಿ ವಾಮದೇವ ಅವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಅಪ್ಪಿ ಮೂಲ್ಯ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ


ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಉಪ್ಪಿರ ಅಂಗನವಾಡಿ ಕೇಂದ್ರದ ಮೇಲೆ ಬೃಹತ್ ಮರ ಉರುಳಿ ಬಿದ್ದು ಅಪಾರ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿಯ ಮಾಹಿತಿ ತಿಳಿಸಿದೆ.
ಶುಕ್ರವಾರದವರೆಗೂ ಕೇವಲ 2 ಮೀಟರ್ ಅಡಿ ಅಂತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿ ಶನಿವಾರ ಬೆಳಿಗ್ಗೆ 5.5 ಮೀ.ಅಡಿ‌ ಅಂತರದಲ್ಲಿ ಹರಿಯುತ್ತಿತ್ತು.

By suddi9

Leave a Reply

Your email address will not be published. Required fields are marked *