ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರಣವ್ ಫೌಂಡೇಶನ್ ಬೆಂಗಳೂರು ಇವರು ಒದಗಿಸಿದ “ಸ್ಮಾರ್ಟ್ ಕ್ಲಾಸ್” ಸೌಲಭ್ಯವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು “ಸಮಾಜದಲ್ಲಿರುವ ಎಲ್ಲರ ಜೀವನಕ್ಕೂ ಒಂದು ಅರ್ಥ ಇದೆ. ತ್ಯಾಗ ಮತ್ತು ಸೇವೆ ಈ ಮಣ್ಣಿನ ಆದರ್ಶಗಳು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತನ್ನು ಪಾಲಿಸಿದಾಗಲೇ ಈ ದೇಶ ಬದಲಾಗುವುದು ನಾವು ಮಾತ್ರ ಬದುಕುವುದಲ್ಲ ಇತರರನ್ನು ಬದುಕಲು ಬಿಡಬೇಕು. ವಿದ್ಯಾರ್ಥಿಗಳಾದ ತಾವು ಕೂಡಾ ಸಣ್ಣ ಪುಟ್ಟ ಸೇವೆ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.

ಆಗ ಮಾತ್ರ ನಮ್ಮ ಬದುಕಿಗೆ ಅರ್ಥ ಬರುತ್ತದೆ” ಎಂದರು. ಬೆಂಗಳೂರು ಪ್ರಣವ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ರಾಕೇಶ್ ರೈ ಮಾತನಾಡಿ ಶ್ರೀರಾಮ ವಿದ್ಯಾಕೇಂದ್ರ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಣವ ಫೌಂಡೇಶನ್ ನಿರ್ದೇಶಕರಾದ ಮಂಜುನಾಥ ಉಡುಪ,ಕಾರ್ಯದರ್ಶಿ ಅಮಿತ್ ಹೆಬ್ಬಾಳ್ , ಸದಸ್ಯರಾದ ನೇತ್ರ ಎನ್, ಪ್ರಿಯ ರಕ್ಷಿತ್, ಕುಸುಮಾಧರ ರೈ, ವಿಷ್ಣು ಕಟ್ಟಿ, ರಕ್ಷಿತ್ ಗೌಡ, ನಾಗರಾಜ್, ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಪ್ರೌಢಶಾಲೆಯ ಆಡಳಿತ ಅಧಿಕಾರಿ ಶಾಂಭವಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಲಕ್ಷ್ಮೀ ರಘುರಾಜ್, ಸುಧಾ ಭಟ್, ಮುಖ್ಯೋಪಾಧ್ಯಾಯರಾದ ಗೋಪಾಲ ಎಂ. ಉಪಸ್ಥಿತರಿದ್ದರು.

ಮೇಘಶ್ರೀ ಸ್ವಾಗತಿಸಿ, ಚಂದ್ರಕಲಾ ಭಟ್ ವಂದಿಸಿದರು. ಭೂಷಣ್ ಕಾರ್ಯಕ್ರಮ ನಿರೂಪಿಸಿದರು.