ಹಿಂದುಳಿದ ಜಾತಿ ಸಮುದಾಯಕ್ಕೂ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಉಚಿತ ತರಬೇತಿ ಅವಕಾಶ ಮಾಡಿಕೊಡುವಂತೆ ಆಗ್ರಹ
ಬಂಟ್ವಾಳ: ಹಿಂದುಳಿದ ಜಾತಿ ಸಮುದಾಯಕ್ಕೂ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಉಚಿತ ತರಬೇತಿ ಅವಕಾಶ ಮಾಡಿಕೊಡುವಂತೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮುಖ್ಯಮಂತ್ರಿಯವರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.
2023-24 ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಂ ಸಮಾಜಕ್ಕೆ ಐಎಎಸ್, ಐಪಿಎಸ್, ಕೆಎಎಸ್, ಮುಂತಾದ ಪದವಿ ಪಡೆಯಲು ಉಚಿತ ವಸತಿ ಸಹಿತ ಉಚಿತ ತರಬೇತಿ ನೀಡುವ ಬಗ್ಗೆ ಉಲ್ಲೇಖ ಮಾಡಲಾಗಿದ್ದು,
ಕರ್ನಾಟಕದಲ್ಲಿ ಶೇ 40 ರಷ್ಟು ಮಂದಿ ಹಿಂದುಳಿದ ವರ್ಗಗಳ ಜಾತಿಗೆ ಸೇರಿದವರಾಗಿದ್ದು ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಬಗ್ಗೆ ಯಾವುದೇ ವಿಷಯ ಪ್ರಕಟಿಸದಿರುವುದರಿಂದ ಹಿಂದುಳಿದ ವರ್ಗದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಮತ್ತು ಕೆಎಎಸ್ ಪದವಿ ಪಡೆಯಲು ನೀಡುವ ಉಚಿತ ವಸತಿ ಸಮೇತ ತರಬೇತಿಯನ್ನು ರಾಜ್ಯದ ಇತರೇ ಹಿಂದುಳಿದ ವರ್ಗದವರಿಗೂ ವಿಸ್ತರಣೆ ಮಾಡುವಂತೆ ಪ್ರಭು ಮನವಿಯಲ್ಲಿ ಒತ್ತಾಯಿಸಿದ್ದಾರೆ