ಬಂಟ್ವಾಳ: ಕ್ಯಾಟರಿಂಗ್ ಮಾಲೀಕರ ಸಂಘದ ಪದಗ್ರಹಣ
ಬಂಟ್ವಾಳ:ಕ್ಯಾಟರಿಂಗ್ ವೃತ್ತಿನಿರತರು ಸಂಘಟಿತರಾಗಿ ಸಂಕಷ್ಟಗಳನ್ನು ಎದರಿಸುವ ಜೊತೆಗೆ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ಕ್ಯಾಟರಿಂಗ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ರಾಜಗೋಪಾಲ ರೈ ಹೇಳಿದ್ದಾರೆ.ಇಲ್ಲಿನ ಲೊರೆಟ್ಟೋ ಮಾತಾ ಸಭಾಂಗಣದಲ್ಲಿ ಕ್ಯಾಟರಿಂಗ್ ಮಾಲೀಕರ ಸಂಘದ ವತಿಯಿಂದ ಭಾನುವಾರ ನಡೆದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ನಾರಾಯಣ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಿಲ್ಲೆಯಾದ್ಯಂತ ತಾಲ್ಲೂಕು ಸಂಘಟನೆಗಳು ರಚನೆಯಾಗಲಿ ಎಂದರು.ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಡುಗೆ ಕೆಲಸ ಸುಲಭವಾಗಿಸಲು ಕ್ಯಾಟರಿಂಗ್ ಉದ್ಯಮ ಅಸ್ಥಿತ್ವಕ್ಕೆ ಬಂದು ಪ್ರಸಕ್ತ ಪ್ರತೀ ಕಾರ್ಯಕ್ರಮಕ್ಕೂ ಕ್ಯಾಟರಿಂಗ್ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ಲೊರೆಟ್ಟೋ ಮಾತಾ ಚರ್ಚ್ ನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ ಆಶೀರ್ವಚನ ನೀಡಿ, ಭೋಜನ ಚೆನ್ನಾಗಿದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಶುಭ ಹಾರೈಸಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುಧಾಕರ ಕಾಮತ್, ಫೆಲಿಕ್ಸ್ ಲಸ್ರಾದೋ, ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ಜೊಸ್ಸಿ ಸಿಕ್ವೇರಾ, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ತಾಲ್ಲೂಕು ಉಪಾಧ್ಯಕ್ಷ ಸದಾನಂದ ಬಿ.ಬಂಗೇರ, ಹೆರಾಲ್ಡ್ ರೋಡ್ರಿಗಸ್, ಕಾರ್ಯದರ್ಶಿ ಪ್ರಕಾಶ ಪೂಜಾರಿ ಮಾವಂತೂರು, ಸಂಘಟನಾ ಕಾರ್ಯದರ್ಶಿ ಆಂಟನಿ ಸಿಕ್ವೇರಾ, ಕೋಶಾಧಿಕಾರಿ ರೋಶನ್ ಡಿಸೋಜಾ, ಜೊತೆಕಾರ್ಯದರ್ಶಿ ವಾಮನ ಬಂಗೇರ, ರೋಷನ್ ಪಿಂಟೋ ಇದ್ದರು. ಇದೇ ವೇಳೆ ಕಲ್ಯಾಣಿ ಕ್ಯಾಟರಿಂಗ್ನ ಮಾಲೀಕ ಲೋಕೇಶ್ ಇವರಿಗೆ ಆರ್ಥಿಕ ನೆರವು ನೀಡಲಾಯಿತು.
ಸಂಘಟನಾ ಕಾರ್ಯದರ್ಶಿ ಆಂಟನಿ ಸಿಕ್ವೇರಾ ಸ್ವಾಗತಿಸಿ, ಉಪಾಧ್ಯಕ್ಷ ಸದಾನಂದ ಬಿ.ಬಂಗೇರ ಸದಸ್ಯರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವಂದಿಸಿದರು, ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.