ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಳದಲ್ಲಿ ಶಿಲಾ ಮುಹೂರ್ತ ; ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ
ಎಲ್ಲರೂ ಬದುಕುವ ವ್ಯವಸ್ಥೆ ಇರುವಲ್ಲಿ ಧರ್ಮವಿದೆ : ಸುಬ್ರಹ್ಮಣ್ಯ ಸ್ವಾಮಿ
ಕೈಕಂಬ : ಎಲ್ಲರಿಗೂ ಬದುಕುವ ವ್ಯವಸ್ಥೆ ಇರುವಲ್ಲಿ ಧರ್ಮವಿದೆ. ಸಾಮಾಜಿಕ ಬದುಕು ಉತ್ತಮವಾಗಿರಲು ಧರ್ಮದ ಅವಶ್ಯಕತೆ ಇದೆ. ಎಲ್ಲ ಮಾನವರು ಮತ್ತು ಜೀವಜಂತುಗಳು ಬದುಕಲು ಅವಕಾಶ ನೀಡುವುದೇ ಧರ್ಮ. ಸಂಸ್ಕಾರವಂತ ಧರ್ಮಾಚರಣೆ ನಮ್ಮದಾಗಬೇಕು. ಅನಾದಿಕಾಲದಿಂದಲೂ ಹಿರಿಯರಿಂದ ಬಂದಿರುವ ಜೀವನಶೈಲಿ ಮರುಕಳಿಸಬೇಕು. ಅದು ಸಮಾಜಕ್ಕೆ ಹಿತವೆನಿಸುವುದು ಎಂದು ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಅಭಿಪ್ರಾಯಪಟ್ಟರು.

ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ನಡೆಯುಲಿರುವ ಜೀರ್ಣೋದ್ಧಾರ ಪ್ರಯುಕ್ತ ಭಾನುವಾರ(ಜು. ೯) ದೇವಸ್ಥಾನದಲ್ಲಿ ನಡೆದ ಶಿಲಾ ಮುಹೂರ್ತದ ಬಳಿಕ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಉತ್ತಮವಾಗಿರಬೇಕಿದ್ದರೆ ದೇವರು-ದೈವಗಳ ಸನ್ನಿಧಾನ ಬೆಳಗಬೇಕು. ಈ ನಿಟ್ಟಿನಲ್ಲಿ ಜೀರ್ಣೋದ್ಧಾರಗೊಂಡು ಮುಂದಿನ ವರ್ಷ ಬ್ರಹ್ಮಕಲಶೋತ್ಸವಕ್ಕೆ ಸನ್ನದ್ಧವಾಗಲಿರುವ ಆದ್ಯಪಾಡಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರಲಿ ಎಂದು ಆಶೀರ್ವದಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಅಂದಾಜು ೮ ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳಲಿರುವ ಈ ಕಾರಣಿಕದ ದೇವಸ್ಥಾನದ ಕೆಲಸದಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಇಂತಹ ಧಾರ್ಮಿಕ ಕ್ಷೇತ್ರಗಳ ಉಳಿಸುವ ನಿಟ್ಟಿನಲ್ಲಿ ಮೊದಲಾಗಿ ನಾವೆಲ್ಲರೂ ಹಿಂದೂಗಳಾಗಬೇಕು. ಹಿಂದೂತ್ವದ ಪರ ಚಿಂತನೆ, ಒಗ್ಗೂಡುವಿಕೆಯಿಂದ ನಮ್ಮ ಧರ್ಮ ಬಲಯುತಗೊಳ್ಳುತ್ತದೆ ಎಂದರು.

ಮಾಜಿ ಸಚಿವ ನಾಗರಾಜ ಶೆಟ್ಟಿ ಬೈಲು ಮೇಗಿನಮನೆ ಅವರು ಪ್ರಸ್ತಾವಿಸುತ್ತ, ಸುಮಾರು ೮೦೦ರಿಂದ ೯೦೦ ವರ್ಷಗಳಷ್ಟು ಪುರಾತನವಾದ ಈ ದೇವಾಲಯದಲ್ಲಿ ಉಬ್ಬಸ(ಅಸ್ತಮ) ಕಾಯಿಲೆ ಗುಣಮುಖಕ್ಕೆ ಪ್ರಾರ್ಥಿಕೊಂಡರೆ ಕಾಯಿಲೆ ಗುಣಮುಖವಾಗುತ್ತದೆ. ಸುಮಾರು ೮ ಕೋಟಿ ರೂ ವೆಚ್ಚದಲ್ಲಿ ದೇವಸ್ಥಾನದಲ್ಲಿ ನೂತನ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಗಣಪತಿ ಗುಡಿ, ಸುತ್ತುಪೌಳಿ, ರಾಜಗೋಪುರ, ಸ್ವಾಗತ ಗೋಪುರ ನಿರ್ಮಾಣಗೊಳ್ಳಲಿದೆ. ಮುಂದಿನ ವರ್ಷ(೨೦೨೪) ಬ್ರಹ್ಮಕಲಶೋತ್ಸವ ನಡೆಯುವಂತೆ ಸಂಕಲ್ಪಿಸಲಾಗಿದೆ ಎಂದರು.

ಪ್ರಧಾನ ಅರ್ಚಕ ಪವಿತ್ರಪಾಣಿ ಮಹೇಶ್ ಭಟ್ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರು. ಮುಂಬೈ ಉದ್ಯಮಿ ಕುಸುಮೋಧರ ಡಿ. ಶೆಟ್ಟಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಮಾತನಾಡಿದರು. ಬಡಾಜೆಗುತ್ತು ರವಿಶಂಕರ್ ಶೆಟ್ಟಿ, ಶೆಟ್ಟೆ ಮಂಜುನಾಥ ಭಂಡಾರಿ ಮಾತನಾಡಿದರು. ಕುಡುಪು ವೇದಮೂರ್ತಿ ನರಸಿಂಹ ತಂತ್ರಿಯವರ ಪೌರೋಹಿತ್ಯದಲ್ಲಿ ಶಿಲಾ ಮುಹೂರ್ತ ನಡೆಯಿತು. ಸ್ಥಳದಾನ ಮಾಡಿದ ಇಂದಿರಮ್ಮ ಕುಟುಂಬದ ಮಾಧವ ರಾವ್ ಅವರನ್ನು ಅಭಿನಂದಿಸಲಾಯಿತು.

ಉದ್ಯಮಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬೈಲು ಏತಮೊಗರುಗುತ್ತು ಸುಜಿತ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ನಂದಬೆಟ್ಟು ಮುರಳೀಧರ ಶೆಟ್ಟಿ ಸ್ವಾಗತಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಏತಮೊಗರುಗುತ್ತು ಸದಾಶಿವ ಯಾನೆ ಜಯ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ಜಗದೀಪ್ ಡಿ. ಸುವರ್ಣ, ದಾಮೋದರ ಎಸ್. ಶೆಟ್ಟಿ ಮುಂಬೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಬೈಲುಬೀಡು ರಾಜೇಂದ್ರ ಬಲ್ಲಾಳ್, ಸದಾನಂದ ಶೆಟ್ಟಿ, ರಘುನಾಥ ಪಯ್ಯಡೆ ಕೂರಿಯಾಲಗುತ್ತು, ಪ್ರಮುಖರಾದ ಕಂದಾವರ ಬಾಳಿಕೆ ಶ್ರೀಧರ ಆಳ್ವ, ರಮಾನಾಥ ಅತ್ತಾರ್, ಮುಂಬೈ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಭುಜಂಗ ಕುಲಾಲ್ ಆದ್ಯಪಾಡಿ, ದೇವಸ್ಥಾನದ ಅರ್ಚಕ ವೃಂದ, ಜೀರ್ಣೋದ್ಧಾರ ಹಾಗೂ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕಂದಾವರ ಕಾರ್ಯಕ್ರಮ ನಿರೂಪಿಸಿದರು.