ಬಜಪೆ ಪೊಲೀಸ್ ಠಾಣೆ:: ಅಂತಿಮ ಹಂತದಲ್ಲಿ ನೂತನ ಕಟ್ಟಡ ಕಾಮಗಾರಿ. ಹೊಸ ಹುಮ್ಮಸ್ಸಿನಲ್ಲಿ ಬಜಪೆ ಪೊಲೀಸ್
ಬಜಪೆ: ಸುಮಾರು 50 ವರ್ಷಗಳಷ್ಟು ಹಳೆಯದಾದ, ಮಳೆಗಾಲದಲ್ಲಿ ಸೋರುವ, ತೀರಾ ಇಕ್ಕಟ್ಟಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಜಪೆ ಪೊಲೀಸ್ ಠಾಣೆಗೆ ತೀರಾ ಅಗತ್ಯವಾಗಿದ್ದ ನೂತನ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಗಂಜಿಮಠ ಕೈಗಾರಿಕಾ ವಲಯ, ಮಂಗಳೂರು ವಿಶೇಷ ವಿತ್ತ ವಲಯದಂತಹ ಆಯಕಟ್ಟಿನ ಸ್ಥಳಗಳು, ಬಜಪೆ ಪಟ್ಟಣ ಪಂಚಾಯತ್ ನ ಕೆಂಜಾರು, ಬಜಪೆ ಮತ್ತು ಮಲವೂರು ಗ್ರಾಮಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮೆನ್ನಬೆಟ್ಟು ಮತ್ತು ಕೊಂಡೆಮೂಲ ಗ್ರಾಮಗಳ ಭಾಗಷ: ಪ್ರದೇಶ, ಪೆರ್ಮುದೆ, ಎಕ್ಕಾರು, ಗುರುಪುರ, ಪಡುಪೆರಾರ, ಗಂಜಿಮಠ, ಮುಚ್ಚೂರು, ಕಂದಾವರ, ಎಡಪದವು,, ಮುತ್ತೂರು, ಕುಪ್ಪೆಪದವು, ಬಡಗ ಎಡಪದವು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯನ್ನು ಮತ್ತು ಕೆಲವು ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಬಜಪೆ ಪೊಲೀಸ್ ಠಾಣೆ ಹಾಲಿ ಕಿರಿದಾದ, ತೀರಾ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಸಜ್ಜಿತ ಹೊಸಕಟ್ಟಡದ ಅವಶ್ಯಕತೆ ಇದ್ದುದರಿಂದ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ 1ಕೋಟಿ 92 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರ ಮುಂದಾಗಿದ್ದು, ಮೂಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ಅವರು 2022 ರ ಮೇ 27 ರಂದು ನೂತನ ಕಟ್ಟಡಕ್ಕೆ ಶಿಲಾನ್ಯಸ ನೆರವೇರಿಸಿದ್ದರು.
ಈಗಿನ ಠಾಣೆಯ ಕೂಗಳತೆ ದೂರದಲ್ಲಿ, ಬಜಪೆ-ಗುರುಪುರ-ಕೈಕಂಬ ರಸ್ತೆಯ ಪಕ್ಕದಲ್ಲಿ 370 ಚದರ ಮೀಟರ್ ವಿಸ್ತೀರ್ಣದ ಒಂದು ಅಂತಸ್ತಿನ ಸುಂದರವಾದ, ಸುಸಜ್ಜಿತ ಕಟ್ಟಡ ಒಂದು ವರ್ಷದಲ್ಲಿ ತಲೆ ಎತ್ತಿದ್ದು, ನೆಲ ಅಂತಸ್ತಿನ 270 ಚದರ ಮೀಟರ್ ವಿಸ್ತೀರ್ಣದಲ್ಲಿ ಪೊಲೀಸ್ ನಿರೀಕ್ಷಕರ ಕೊಠಡಿ, ಸಂದರ್ಶಕರ ಕೊಠಡಿ, ಸಬ್ ಇನ್ಸ್ಪೆಕ್ಟರ್ ಗಳ ಛೇoಬರ್, ಆಯುಧ ಕೊಠಡಿ, ವಯರ್ ಲೆಸ್ ಕೊಠಡಿ, ಪುರುಷ ಮತ್ತು ಮಹಿಳಾ ಖೈದಿಗಳಿಗೆ ಲಾಕಪ್, ಪುರುಷ ಮತ್ತು ಮಹಿಳಾ ಶೌಚಾಲಯಗಳನ್ನು ಒಳಗೊಂಡಿದ್ದು, 105 ಚದರ ಮೀಟರ್ ವಿಸ್ತೀರ್ಣದ ಮಹಡಿಯಲ್ಲಿ ಧಾಖಲೆಗಳ ಕೊಠಡಿ, ಪುರುಷ ಮತ್ತು ಮಹಿಳಾ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ ಹೊಂದಿದೆ.
ನೂತನ ಠಾಣೆಗೆ ಹೊಸ ಧ್ವಜಸ್ಥoಭ ಹಾಗೂ ಹೊರಾಂಗಣಕ್ಕೆ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಪೀಠೋಪಕಾರಣ ತಯಾರಿ ಮತ್ತು ವಿದ್ಯುದೀಕರಣದ ಕಾಮಗಾರಿಗಳು ನಡೆಯುತ್ತಿವೆ.ಬಜಪೆ ಠಾಣೆಯಲ್ಲಿ ನಾಲ್ಕು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿದ್ದು, ಪ್ರಸ್ತುತ ಎರಡು ಹುದ್ದೆಗಳು ಖಾಲಿ ಇವೆ. ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಪೂವಪ್ಪ ಅವರಿಂದ ಒಂದು ಹುದ್ದೆ ತೆರವಾಗಿದ್ದರೆ ಒಂದು ಹುದ್ದೆ ಅದಕ್ಕೂ ಹಿಂದಿನಿಂದಲೇ ಖಾಲಿಯಾಗಿತ್ತು. ನಾಲ್ಕು ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಭರ್ತಿಯಾದಲ್ಲಿ ನೂತನ ಕಟ್ಟದಲ್ಲಿ ಸಬ್ ಇನ್ಸ್ಪೆಕ್ಟರ್ ಕೊಠಡಿ ಕೊರತೆಯಾಗಲಿದೆ. ನೂತನ ಕಟ್ಟಡದಲ್ಲಿ ಎರಡು ಸಬ್ ಇನ್ಸ್ಪೆಕ್ಟರ್ ಕೊಠಡಿಗಳನ್ನು ಮಾತ್ರ ನಿರ್ಮಿಸಲಾಗಿದೆ.
ನೂತನ ಕಟ್ಟಡ ಮಳೆಗಾಲದ ಬಳಿಕವಷ್ಟೇ ಉದ್ಘಾಟನೆಯಾಗುವ ಸಾಧ್ಯತೆ ಇದ್ದು, ಹೊಸ ಕಟ್ಟಡದಲ್ಲಿ ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡಲು ತಯಾರಾಗುತ್ತಿದ್ದಾರೆ ಬಜಪೆ ಪೊಲೀಸರು.”ಹಾಲಿ ಕಟ್ಟಡ ತೀರಾ ಇಕ್ಕಟ್ಟಾಗಿದ್ದು, ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿತ್ತು. ಠಾಣೆಯ ಕಾರ್ಯನಿರ್ವಾಹಣೆಗೆ ಸ್ಥಳಾವಕಾಶದ ಕೊರತೆ ಇತ್ತು. ಹೊಸ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ಹೊಸ ಕಟ್ಟಡ ಶೀಘ್ರದಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ”: ಪ್ರಕಾಶ್. ಪೊಲೀಸ್ ನಿರೀಕ್ಷಕರು, ಬಜಪೆ ಠಾಣೆ.
ಟ್ರಾಫಿಕ್ ಠಾಣೆ ಅವಶ್ಯ:
ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಧಾರ್ಮಿಕ, ಆಯಕಟ್ಟಿನ ಸ್ಥಳಗಳನ್ನು ಒಳಗೊಂಡ ಬಜಪೆ ಪೊಲೀಸ್ ಠಾಣೆಗೆ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ಒತ್ತಡದ ನಡುವೆ ಆಗಾಗ ಎದುರಾಗುತ್ತಿರುವುದು ಟ್ರಾಫಿಕ್ ಸಮಸ್ಯೆ. ಕಟೀಲು ದೇವಸ್ಥಾನದ ಪ್ರಮುಖ ಕಾರ್ಯಕ್ರಮಗಳು, ವಿವಿಐಪಿ ಗಳ ಭೇಟಿ, ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಎದುರಾಗುವ ಟ್ರಾಫಿಕ್ ಸಮಸ್ಯೆಗಳು ಬಜಪೆ, ಗುರುಪುರ-ಕೈಕಂಬ ಪೇಟೆಗಳ ವಾಹನ ಸಂಚಾರ ವ್ಯವಸ್ಥೆಯ ಜತೆಗೆ ಗುರುಪುರ ಮತ್ತು ಮರವೂರು ಸೇತುವೆಗಳ ಮೇಲಿನ ನಿಗಾ ಬಜಪೆ ಪೋಲೀಸರಿಗೆ ಹೆಚ್ಚಿನ ಕಾರ್ಯದೊತ್ತಡವನ್ನು ಉಂಟು ಮಾಡುತ್ತಿವೆ. ಬಜಪೆ, ಗುರುಪುರ- ಕೈಕಂಬ ಮತ್ತು ಮೂಡಬಿದ್ರಿಗೆ ಸೇರಿದಂತೆ ಪ್ರತ್ಯೇಕ ಟ್ರಾಫಿಕ್ ಠಾಣೆ ಸ್ಥಾಪಿಸಿದಲ್ಲಿ, ಟ್ರಾಫಿಕ್ ಸಮಸ್ಯೆ ಬಜಪೆ ಪೋಲೀಸರಿಂದ ಪ್ರತ್ಯೇಕಗೊಂಡಲ್ಲಿ ಅಪರಾಧ ಪ್ರಕರಣಗಳ ತನಿಖೆ ಮತ್ತು ತ್ವರಿತ ವಿಲೇವಾರಿಗೆ ಅನುಕೂಲವಾಗಲಿದೆ.