ಗುರುಪುರ ಲಾರಿಉರುಳಿ ಬಿದ್ದು ವಾಹನ ಸಂಚಾರ ಸ್ಥಗಿತ
ಕೈಕಂಬ: ರಾಷ್ಟ್ರೀಯ ಹೆದ್ದಾರಿ ೧೬೯ರ ಗುರುಪುರ ಸಮೀಪದ ವನಭೋಜನದ ಬಳಿ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಮಣ್ಣು ಹೇರಲಾದ ಲಾರಿಯೊಂದು ಉರುಳಿ ಬಿದ್ದು, ವಾಹನ ಸಂಚಾರ ಸುಮಾರು ಒಂದೂವರೆ ತಾಸು ಸ್ಥಗಿತಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಲಾರಿಯಲ್ಲಿ ಗಂಜಿಮಠದಿಂದ ಮಂಗಳೂರು ಮೂಲಕ ಆಂಧ್ರಪ್ರದೇಶಕ್ಕೆ ಕೆಂಪು ಕಲ್ಲಿನ ಕ್ವಾರಿಯ ಭಾರೀ ಪ್ರಮಾಣದಲ್ಲಿ ಕೆಂಪು ಮಣ್ಣು ಸಾಗಿಸಲಾಗುತ್ತಿತ್ತು. ಗುರುಪುರಕ್ಕೆ ಬರುತ್ತಲೇ ಇಳಿಜಾರು ಪ್ರದೇಶದಲ್ಲಿ ಪಕ್ಕದ ಗುಡ್ಡದ ಮೇಲೇರಿದ ಲಾರಿ ರಸ್ತೆಗೆ ಉರುಳಿ ಮಣ್ಣೆಲ್ಲ ರಸ್ತೆಗೆ ಬಿದ್ದಿದೆ. ಹಿಟಾಚಿ, ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಲಾಗಿದೆ. ಈ ವೇಳೆ ಬಜ್ಪೆ ಠಾಣಾಧಿಕಾರಿ ಪ್ರಕಾಶ್ ಮತ್ತು ಅವರ ತಂಡ ಈ ಮಾರ್ಗವಾಗಿ ಸಾಗುವ ವಾಹನಗಳಿಗೆ ಬೇರೆಡೆ ಸಾಗಲು ವ್ಯವಸ್ಥೆ ಮಾಡಿದರು.

ಕೆಲವು ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಘನ ವಾಹನವೊಂದು ರಸ್ತೆ ಬದಿಯ ಕಣಿವೆಗೆ ಉರುಳಿದ್ದು, ರಸ್ತೆಯ ಅಂಚು ಸಂಪೂರ್ಣ ಜಖಂಗೊಂಡಿತ್ತು. ಜೊತೆಗೆ ರಸ್ತೆ ಕುಗ್ಗಿ ಹೋಗಿ, ಬಿರುಕು ಬಿಟ್ಟಿತ್ತು. ತಿರುವು ಮತ್ತು ಅಪಾಯಕಾರಿಯಾದ ಈ ಪ್ರದೇಶದಲ್ಲಿ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗವು ಕೆಲವು ಬ್ಯಾರಿಕೇಡ್ ಅಳವಡಿಸಿದೆಯೇ ಹೊರತು ಈವರೆಗೆ ದುರಸ್ತಿ ಮಾಡಿಲ್ಲ. ಕಳೆದ ಆರು ತಿಂಗಳ ಅವಧಿಯಲ್ಲಿ ಇಲ್ಲಿ ನಾಲ್ಕೆÊದು ಅಪಘಾತ ಸಂಭವಿಸಿದೆ.