ಪೊಳಲಿ ನಮ್ಮೂರು ನಮ್ಮ ಕೆರೆ ಮಾದರಿ ಕೆರೆಯ ಹೂಳೆತ್ತುವ ಕಾರ್ಯ ಪೂರ್ಣ
ಪೊಳಲಿ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕುಟ ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ(ಬಂಟ್ವಾಳ ತಾಲೂಕು) `ಕುಲ’ ಎನ್ನುವ ಬೃಹತ್ ಕೆರೆಯ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಲಾಗಿದ್ದು, ಈಗ ಕೆರೆಯೊಳಗೆ ಕಪ್ಪು ಕಲ್ಲಿನ ಹಾಸು ಕಾಮಗಾರಿ ನಡೆಯುತ್ತಿದೆ. ಕರಿಯಂಗಳ ಪಂಚಾಯತ್ ವತಿಯಿಂದ ಕೆರೆಯ ಇನ್ನುಳಿದ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಸುಮಾರು ೬೦೦ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೨ ಕೆರೆ ಮತ್ತು ಉಡುಪಿ ಜಿಲ್ಲೆಯಲ್ಲಿ ೧೭ ಕೆರೆಗಳ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.೧೦ ಲಕ್ಷ ರೂ ವೆಚ್ಚದಲ್ಲಿ ಕುಲ ಕೆರೆಯ ಹೂಳೆತ್ತಲು ಯೋಜನೆ ರೂಪಿಸಲಾಗಿದ್ದರೂ, ಇಲ್ಲಿಯ ಕೆರೆಯ ಹೋಳೆತ್ತಲು ೭ ಲಕ್ಷ ರೂ ವೆಚ್ಚ ತಗಲಿದೆ.

ಒಟ್ಟು ೭ ಎಕ್ರೆ ಜಾಗದಲ್ಲಿ ವಿಸ್ತರಿಸಿಕೊಂಡಿದ್ದ ಕುಲ ಕೆರೆಯ ೩ ಎಕ್ರೆ ಜಾಗದಲ್ಲಿ ನೀರಿನ ಆಶ್ರಯದ ೩ ಎಕ್ರೆ ಜಾಗದಲ್ಲಿ ಸುಮಾರು ಮೂರೂವರೆ ಅಡಿ ಆಳಕ್ಕೆ ಹೂಳೆತ್ತಲಾಗಿದೆ. ಇದರಿಂದ ಮಳೆಗಾಲದಲ್ಲಿ ಕೆರೆ ತುಂಬಲಿದ್ದು, ಬೇಸಗೆಯಲ್ಲಿ ಸುತ್ತಲ ಜನವಸತಿ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ ಸ್ಥಳೀಯರಿಗೆ ಅನುಕೂಲವಾಗಲಿದೆ.
ಹೂಳೆತ್ತಲಾದ ಕೆರೆಯ ಸುತ್ತಲು ವಾಕಿಂಗ್ ರಸ್ತೆ, ಉದ್ಯಾನ, ವಾಹನ ಪಾರ್ಕಿಂಗ್, ದೀಪ ಹಾಗೂ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗ್ರಾಮ ಪಂಚಾಯತ್ ಯೋಜನೆಯನ್ನು ಹಮ್ಮಿಕೊಂಡಿದೆ.

`ಬಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಘಟಕವು ಕಲ್ಕುಟ ಕೆರೆಯ ಹೂಳೆತ್ತುವ ಕಾರ್ಯ ನಡೆಸಿದೆ. ಪಂಚಾಯತ್ ವತಿಯಿಂದ ಸರ್ಕಾರದ ಅಮೃತ ಯೋಜನೆಯಡಿ ಕೆರೆಯ ನಿರ್ವಹಣೆ ಜೊತೆಗೆ ಇನ್ನುಳಿದ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಉದ್ಯೋಗ ಖಾತರಿ ಯೋಜನೆಯ ೩೯ ಲಕ್ಷ ರೂ ವೆಚ್ಚದಲ್ಲಿ ಕೆರೆಯ ಸುತ್ತಲು ಕಪ್ಪು ಕಲ್ಲು ಹಾಸುವ ಕೆಲಸ ನಡೆಯುತ್ತಿದೆ. ಕೆರೆಯ ಇನ್ನುಳಿದ ಅಭಿವೃದ್ಧಿ ಕಾರ್ಯಕ್ಕೆ ಶಾಸಕರು, ಸರ್ಕಾರ, ಎಂಆರ್‌ಪಿಎಲ್, ಊರಿನ ದಾನಿಗಳು, ಬ್ಯಾಂಕ್ ಆಫ್ ಬರೋಡ, ಪೊಳಲಿ ರಾಮಕೃಷ್ಣ ತಪೋವನದ ನೆರವು ಯಾಚಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ನಮ್ಮೂರ ಕೆರೆ’ಯಾಗಿ ಮಾದರಿ ಕೆರೆಯನ್ನಾಗಿಸುವ ಉದ್ದೇಶ ಪಂಚಾಯತ್‌ಗೆ ಇದೆ. ಪ್ರವಾಸೋದ್ಯಮಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗಿದೆ” ಎಂದು ಕರಿಯಂಗಳ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಹೇಳಿದರು.
“ಪೊಳಲಿ ಆಸುಪಾಸಿನಲ್ಲಿ ವಿವಿಧ ಕೃಷಿ ನಡೆಯುತ್ತಿದೆ. ಬೇಸಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ಇದೆ ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆಗಳ ಹೂಳೆತ್ತಿ ಪರಿಸರದಲ್ಲಿ ಅಂತರ್ಜಲ ವೃದ್ಧಿಸುವ ಯೋಜನೆ ರೂಪಿಸಲಾಗಿದೆ. ಕುಲ ಕೆರೆಯ ಹೂಳೆತ್ತುವ ಕಾರ್ಯ ನಡೆದಿದೆ. ಇದಕ್ಕಾಗಿ ಒಟ್ಟು ೭ ಲಕ್ಷ ರೂ ವ್ಯಯಿಸಲಾಗಿದೆ. ಉಳಿದ ಕೆಲಸಗಳು ಪಂಚಾಯತ್ ವತಿಯಿಂದ ನಡೆಯಲಿವೆ” ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಕೃಷಿ ಅಧಿಕಾರಿ ಜನಾರ್ಧನ,ಇಂಜಿನೀಯರ್ ಭರತ್, ಪ್ರಭಾರ ಪಿಡಿಒ ಭಾರತಿ ಪೊಳಲಿ ರಾಮಕೃಷ್ಣ ತಫೋವನದ ಸ್ವಾಮಿ ವಿವೇಕಚೈತನ್ಯಾನಂದ, ಪೊಳಲಿ ವಲಯದ ಮೇಲ್ವಿಚರಾಕರು ಹರಿನಾಕ್ಷಿ, ಕೆರೆ ಸಮಿತಿ ಅಧ್ಯಕ್ಷರು ಜನಾರ್ಧನ ಆಚಾರ್ಯ , ಗ್ರಾ.ಪಂ.ಸದಸ್ಯರು , ಯಶವಂತ ಪೊಳಲಿ, ಸೇವಾ ಪ್ರತಿನಿಧಿಗಳಾದ ರೇಖಾ, ಅಶ್ವಿನಿ ಮತ್ತಿತರರು ಇದ್ದರು.