ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ತನ್ನ ಮಕ್ಕಳ ಭವಿಷ್ಯ ಉಜ್ವಲಗೊಳಿಸಲ್ಲ ಪಕ್ಷಾಭ್ಯರ್ಥಿಗಳಿಗೆ ಮತ ಚಲಾಯಿಸಿ: ಬಿ. ಕೆ. ಹರಿಪ್ರಸಾದ್
ಗುರುಪುರ ಕೈಕಂಬದಲ್ಲಿ `ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ
ಕೈಕಂಬ: ಭ್ರಷ್ಟಾಚಾರ, ಶೋಷಣೆ, ದುರಂಕಾರ, ವಂಚನೆ, ಕೋಮು ದ್ವೇಷ, ಬೆಲೆ ಏರಿಕೆಯಂತಹ ಅಸಾಂವಿಧಾನಿಕ ಕಾರ್ಯಗಳನ್ನೇ ತಮ್ಮ ಸಾಧನೆ ಎಂದು ಬೀಗುತ್ತಿರುವ ಪ್ರಸಕ್ತ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ, ಪ್ರತಿಯೊಬ್ಬ ಮತದಾರನೂ ತನ್ನ ಹಾಗೂ ತನ್ನ ಮಕ್ಕಳ ಭವಿಷ್ಯ ಉಜ್ವಲಗೊಳಿಸಲ್ಲ ಪಕ್ಷಾಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿದರು.

ಅವರು ಗುರುವಾರ ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ ಕೆಪಿಸಿಸಿ ನಿರ್ದೇಶನದಂತೆ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕಾನೂನು ರಕ್ಷಣೆಗೆ ಪೊಲೀಸ್ ಸಹಿತ ಪ್ರತ್ಯೇಕ ವಿಭಾಗಗಳೇ ಇದ್ದರೂ, ಬಿಜೆಪಿಗರು ಹೇಳುವಂತೆ ನಿಮ್ಮ ಮಕ್ಕಳ ಕೈಯಲ್ಲಿ ಕತ್ತಿ, ಚೂರಿ ಹರಿತ ಮಾಡಿಕೊಳ್ಳದೆ ಶಿಕ್ಷಣಕ್ಕೆ ಮಹತ್ವ ನೀಡಿ. ಅನ್ಯಕೋಮಿನ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಶರಣ್ ಪಂಪ್ವೆಲ್ ಎಂಬಾತ ತಾನೇ ಕೊಲೆಗೈದಿದ್ದೇನೆ ಎಂದು ಪ್ರಕಟಿಸಿದ್ದರೂ, ಆತನ ವಿರುದ್ಧ ಈ ಹೇಡಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಇಂದಿರಾ ಗಾಂಧಿಯವರು
ಉಳುವವನೇ ಒಡೆಯ’ ಕಾನೂನು ತಂದಿದ್ದರೆ, ಮೋದಿಯವರು `ಉಳ್ಳವರೇ ಒಡೆಯ’ ಕಾನೂನು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾತನಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ಮೇಲ್ದರ್ಜೆಗೇರಿಸಿ ೨,೫೦೦ ಕೋಟಿ ರೂ ವಾರ್ಷಿಕ ಬಜೆಟ್ ನೀಡಲಾಗುವುದು. ಮಂಗಳೂರಿನಲ್ಲಿ ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರೀ ಪಾರ್ಕ್ ಸ್ಥಾಪಿಸಿ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು.
ಪ್ರತಿಯೊಬ್ಬ ಮೀನುಗಾರರಿಗೆ ತಲಾ ೧೦ ಲಕ್ಷ ಮೊತ್ತ ವಿಮೆ, ಮೀನುಗಾರ ಮಹಿಳೆಯರಿಗೆ ೧ ಲಕ್ಷ ತನಕ ಬಡ್ಡಿರಹಿತ ಸಾಲ, ಬಿಲ್ಲವರಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ' ಮತ್ತು ಬಂಟರಿಗಾಗಿ
ಬಂಟ್ಸ್ ಅಭಿವೃದ್ಧಿ ನಿಗಮ’ ಸ್ಥಾಪಿಸಿ ವಾರ್ಷಿಕ ತಲಾ ೨೫೦ ಕೋಟಿಯಂತೆ ೫ ವರ್ಷಕ್ಕೆ ೧,೨೫೦ ಕೋ. ರೂ. ಅನುದಾನ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸ್ವಾಮಿ ವಿವೇಕಾನಂದ ಕೋಮು ಮತ್ತು ಸಾಮಾಜಿಕ ಸಾಮರಸ್ಯ ಸಮಿತಿ ಸ್ಥಾಪಿಸಿ ಸೂಕ್ತ ಅನುದಾನ ಮತ್ತು ಕಾರ್ಯಕ್ರಮ ನಡೆಸಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲ ವರ್ಗ, ಸಮುದಾಯಗಳ ಏಳ್ಗೆಯೇ ಪಕ್ಷದ ಕಟ್ಟಕಡೆಯ ಜನಸೇವೆಯಾಗಲಿದೆ ಎಂದರು.


ಎಂಎಲ್‌ಸಿ ಮಂಜುನಾಥ ಭಂಡಾರಿ ಮಾತನಾಡಿ, ಪಕ್ಷದ ಸಿದ್ಧಾಂತ ಜನರಿಗೆ ತಿಳಿಸಿ ಅದನ್ನು ಮತವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಅಹೋರಾತ್ರಿ ಫೀಲ್ಡ್ನಲ್ಲಿರಬೇಕು. ಇವರಿಗೆ ನಾಯಕರು ಸಾಥ್ ನೀಡಬೇಕು. ಬಿಜೆಪಿ ಸರ್ಕಾರದ ಬೆಲೆ ಏರಿಕೆ, ಗ್ಯಾಸ್, ಇಂಧನ, ಜಿಎಸ್‌ಟಿ ಸುಲಿಗೆ, ನಿರುದ್ಯೋಗ ಮತ್ತಿತರ ದುರಾಡಳಿತಗಳ ಬಗ್ಗೆ ಜನಸಾಮಾನ್ಯರಿಗೆ ತಲುಪಿಸಿ ಎಂದರು.

ಉಳ್ಳಾಲ ಶಾಸಕ ಯು. ಟಿ. ಖಾದರ್ ಮಾತನಾಡಿ, ಕೋಮುವಾದಿ ಪಕ್ಷವಾದ ಬಿಜೆಪಿ ಸರ್ಕಾರ ಕಿತ್ತೊಗೆಯುವ ನಿಟ್ಟಿನಲ್ಲಿ ನಿಮ್ಮ ಒಂದೊಂದು ಮತವೂ ಅಮೂಲ್ಯವಾಗಿದೆ. ಜನರಿಗೆ ಮೋಸ ಮಾಡುವ, ಒಂದೂ ನಿವೇಶನ ನೀಡದ, ಬೆಲೆ ಏರಿಕೆಗೆ ಒತ್ತು ನೀಡಿರುವ, ಜಿಎಸ್‌ಟಿ ಸುಲಿಗೆಯಂತಹ ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಅಂತ್ಯ ಹಾಡೋಣ ಎಂದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಮೊಯಿದಿನ್ ಬಾವ ಮತ್ತು ಇನಾಯತ್ ಅಲಿ, ಮಾಜಿ ಎಂಎಲ್‌ಸಿ ಐವನ್ ಡಿ’ಸೋಜ, ಗಂಜಿಮಠ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ ಮಾತನಾಡಿದರು.
ಕಾಂಗ್ರೆಸ್ ಭರವಸೆ :
ಪ್ರತಿ ಮನೆಗೂ ಮಾಸಿಕ ೨೦೦ ಯೂನಿಟ್ ಉಚಿತ ವಿದ್ಯುತ್(ವಾರ್ಷಿಕ ೯೬,೦೦೦ ಯೂನಿಟ್) ನೀಡುವ ಗೃಹ ಜ್ಯೋತಿ', ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು ೨,೦೦೦ ರೂ(ವಾರ್ಷಿಕ ೨೪,೦೦೦ ರೂ) ನೀಡುವ
ಗೃಹ ಲಕ್ಷ್ಮೀ ‘ ಹಾಗೂ ಪ್ರತಿಯೊಬ್ಬ ವ್ಯಕ್ತಿಗೆ ತಿಂಗಳಿಗೆ ತಲಾ ೧೦ ಕಿಲೋ ಅಕ್ಕಿ ವಿತರಿಸುವ ಕಾರ್ಯಕ್ರಮ ಕಾಂಗ್ರೆಸ್‌ನಲ್ಲಿದೆ.

ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಕವಿತಾ ಸನಿಲ್, ಅಬ್ದುಲ್ ಮಜೀದ್, ಪುರುಷೋತ್ತಮ ಚಿತ್ರಾಪುರ, ಗಿರೀಶ್ ಆಳ್ವ, ಯು. ಪಿ. ಇಬ್ರಾಹಿಂ, ಮಮತಾ ಗಟ್ಟಿ, ಗುರುಪುರ ಗ್ರಾಂ. ಪಂ. ಅಧ್ಯಕ್ಷ ಯಶವಂತ ಶೆಟ್ಟಿ, ಸುನಿಲ್ ಗಂಜಿಮಠ, ಕೃಷ್ಣ ಅಮೀನ್, ಪದ್ಮನಾಭ ಕೋಟ್ಯಾನ್, ಚಿತ್ತರಂಜನ್ ಶೆಟ್ಟಿ, ದೀಪಕ್ ಪೆರ್ಮುದೆ, ಮೌರೀಸ್, ಲುಕ್ಮಾನ್, ೧೩ ವಲಯ ಮತ್ತು ಒಂದು ವಾರ್ಡ್ನ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ಪೃಥ್ವಿರಾಜ್ ಆರ್. ಕೆ., ವಂದಿಸಿದರು.ಹಮೀದ್ ಕೊಳತ್ತಮಜಲ್ ನಿರೂಪಿಸಿದರು.