Published On: Sat, Jan 21st, 2023

ಗುರುಪುರ ಗೋಳಿದಡಿ ಗುತ್ತಿನ ವರ್ಷದ ಪರ್ಬ

ಕೊರಗರ ಕುಣಿತ, ಭಾಷೆ, ಕುಸುರಿ, ಕೊರಗ ತನಿಯ ದೈವದ ಆರಾಧನೆಗೆ ಜನ ನಿಶಬ್ಧ

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ ಗುತ್ತುದ ವರ್ಸದ ಪರ್ಬ'ದ ೨ನೇ ದಿನ ಸಂಜೆ ಉಡುಪಿ ಜಿಲ್ಲೆಯ ಬಾರ್ಕೂರಿನ ಹೇರಾಡಿ ಗ್ರಾಮದ ಹುಭಾಶಿಕ ಕೊರಗರ ಯುವಕಲಾ ವೇದಿಕೆ(ರಿ) ಕಲಾವಿದರಿಂದ ಪ್ರದರ್ಶನಗೊಂಡ ಅತಿ ವಿಶಿಷ್ಟವೂ, ಅಪೂರ್ವವೂ ಆದಂತಹಕೊರಗರ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮಕ್ಕೆ ನೂರಾರು ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಕೊರಗ ಪರಂಪರೆಯ ಕುಣಿತ, ಬುಟ್ಟಿ ಹೆಣೆಯುವ, ಡೋಲು ಸಿದ್ಧಪಡಿಸುವ ನೈಪುಣ್ಯತೆ ಅತ್ಯದ್ಭುತವಾಗಿತ್ತು.

ತಂಡದ ನಿರೂಪಕ ಬಾರ್ಕೂರಿನ ಗಣೇಶ್ ವಿ. ಅವರು ಕೊರಗರ ಆಚಾರ ವಿಚಾರ, ಭಾಷೆ, ಕಲೆಗಾರಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಮರವನ್ನೇ ಕೊಲ್ಲುವ ಬಳ್ಳಿ :

ಹಿಂದೆ ಅರಣ್ಯ ಪ್ರದೇಶಗಳಲ್ಲಿ ಮರಗಳಿಗೆ ಸುತ್ತುವರಿದು ಬೆಳೆಯುವ ಬಳ್ಳಿಯೊಂದು ಕಾಲಕ್ರಮೇಣ ಮರಕ್ಕಿಂತ ದೊಡ್ಡದಾಗಿ ಬೆಳೆಯುತ್ತದೆ. ಆ ಹೊತ್ತಿಗೆ ಬಳ್ಳಿಯ ಹಿಡಿತಕ್ಕೆ ನಲುಗಿ ಆ ಮರ ಸಾಯುತ್ತದೆ. ಅಂತಹ ವಿಶಿಷ್ಟ ಬಳ್ಳಿ ಕಡಿದು ಬುಟ್ಟಿ ಹೆಣೆಯುತ್ತಿದ್ದ ಕೊರಗ ಜನಾಂಗದವರು, ಮರ ಕೊಲ್ಲುವ ಬಳ್ಳಿಗೆ ಅಂತ್ಯ ಹಾಡುತ್ತಿದ್ದರು. ಅಂದರೆ, ಕೊರಗ ಜನಾಂಗವರಲ್ಲಿ ಈ ತಿಳುವಳಿಕೆ ಅನಾದಿ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ ಎಂದು ಅರ್ಥವಾಗುತ್ತದೆ.

ಹೊನ್ನೆ ಅಥವಾ ಹಲಸಿನ ಮರದಿಂದಲೇ ಡೋಲು ತಯಾರಿಸಲಾಗುತ್ತದೆ. ಉಳಿದ ಮರಗಳಿಗೆ ಡೋಲಿನ ಸ್ವರ ಭಾರ ಹಿಡಿದುಕೊಳ್ಳುವ ಶಕ್ತಿ ಇಲ್ಲ. ಡೋಲಿಗೆ ಎತ್ತಿನ ಚರ್ಮ ಬಳಸಲಾಗುತ್ತದೆ. ಡೋಲಿಗೆ ಕೋಲಿನಿಂದ ಬಾರಿಸುವ ಬದಿಗೆ ದಪ್ಪ ಚರ್ಮ ಮತ್ತು ಕೈಯಿಂದ ಬಾರಿಸುವ ಬದಿಗೆ ತೆಳು ಚರ್ಮ ಬಳಸಲಾಗುತ್ತದೆ. ಹಿಂದೆ ಮದುವೆ ದಿಬ್ಬಣ, ಕಂಬಳ, ಉತ್ಸವ, ಬೊಜ್ಜ ಮೊದಲಾದ ಕಾರ್ಯಕ್ರಮಗಳಲ್ಲಿ ಭಿನ್ನ ಸ್ವರದೊಂದಿಗೆ ಡೋಲು ಬಾರಿಸಲಾಗುತ್ತಿತ್ತು ಎನ್ನುತ್ತಾರೆ ಗಣೇಶ್ ವಿ.

ಮನಮೋಹಕ ಕುಣಿತ :

ಗೋಳಿದಡಿ ಗುತ್ತಿನ ಪ್ರಾಂಗಣದಲ್ಲಿ ನಡೆದ ಕೊರಗರ ಕುಣಿತ ಮನಮೋಹಕವಾಗಿತ್ತು. ತಂಡದ ಕಲಾವಿದರು ಪ್ರಾತ್ಯಕ್ಷಿಕೆ ಮೂಲಕ ಕೊರಗ ತನಿಯ ದೈವದ ಆರಾಧನಾ ಕ್ರಮ ಹಾಗೂ ಕೊರಗರ ಭಿನ್ನ ಭಾಷಾ ಪ್ರಯೋಗದ ಬಗ್ಗೆ ಮಾಹಿತಿ ನೀಡಿದರು.

ಬಳಿಕ ದೆಹಲಿಯ ನೃತ್ಯಗುರು ಕಲೈಮಾಮಣಿ ರಮಾ ವೈದ್ಯನಾಥನ್ ಇವರ ಶಿಷ್ಯೆ ಶುಭಮಣಿ ಚಂದ್ರಶೇಖರ್ ಇವರಿಂದ ಭರತನಾಟ್ಯಂ, ಮಂಗಳೂರು ಸನಾತನ ನಾಟ್ಯಾಲಯ ತಂಡದ ಕಲಾವಿದರಿಂದ ವಿಭಿನ್ನ ನೃತ್ಯ ಪ್ರದರ್ಶನ ನಡೆಯಿತು. ದ.ಕ ಜಿಲ್ಲಾ ಸಂಸದ, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಇತರ ಅನೇಕ ಗಣ್ಯರು ಪರ್ಬದ ಸಡಗರ ಕಂಡು ಸಂತೋಷ ವ್ಯಕ್ತಪಡಿಸಿದರು.

ಜ. ೧೯ರಂದು ದೇವತಾ ಕಾರ್ಯಗಳ ಬಳಿಕ ಮೂಡುಶೆಡ್ಡೆಯ ಶ್ರೀದೇವಿ ಭಜನಾ ಮಂದಿರದ ತಂಡದಿಂದ ಭಜನಾ ಸತ್ಸಂಗ ನಡೆಯಿತು. ರಾತ್ರಿ ೬:೩೦ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಪ್ರೊ. ಪವನ್‌ಕಿರಣ್ ಕೆರೆ ವಿರಚಿತ `ನಾಗ ಸಂಜೀವನ’ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು. ಮೂರು ದಿನವೂ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಭೋಜನ ಹಾಗೂ ಫಲಾಹಾರ ಸತ್ಕಾರ ಏರ್ಪಡಿಸಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಶಕ್ತಿಕಲ್ಲು ಪ್ರದರ್ಶನದಲ್ಲಿ ಅತಿ ಹೆಚ್ಚು ಭಾರದ ಕಲ್ಲು ಎತ್ತಿದ ಮಹಿಳಾ ಮತ್ತು ಪುರುಷರಿಗೆ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಅವರ ಪತ್ನಿ ಉಷಾ ಪ್ರಸಾದ್ ಶೆಟ್ಟಿ ಹಾಗೂ ಮಕ್ಕಳು ಅಕ್ಕಿಮುಡಿ, ಬಾಳೆಹಣ್ಣಿನ ಗೊನೆ ಬಹುಮಾನ ವಿತರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter