ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಸವಾರ ಸಾವು
ಬೆಳ್ತಂಗಡಿ: ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ನಿಯಂತ್ರಣ ಕಳೆದುಕೊಂಡು ಬೈಕ್ ಮನೆಯ ಗೇಟಿನ ಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನೆರಿಯ ಗ್ರಾಮದ ಪಾದೆಗುಡ್ಡೆ ನಿವಾಸಿ ನೋಣಯ್ಯ ಗೌಡರ ಪುತ್ರ ಪ್ರದೀಪ್ (22) ಮೃತಪಟ್ಟಿದ್ದಾರೆ.

ಪ್ರದೀಪ್ ಸಂಬಂಧಿಗಳ ಮನೆಯಲ್ಲಿ ಇರುವ ಶುಭ ಕಾರ್ಯದ ನಿಮಿತ್ತ ವಸ್ತುವೊಂದನ್ನು ನೀಡಲು ಹೋಗುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು, ಈ ಹಿಂದೆ ಕೂಡ ಇಲ್ಲಿ ಹಲವಾರು ಭಾರಿ ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿದೆ. ಪ್ರದೀಪ್ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎಡ ಭಾಗದಲ್ಲಿರುವ ಮನೆಯ ಗೇಟಿನ ಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಲ್ಲಿದ್ದ ಸ್ಥಳೀಯರು ತಕ್ಷಣ ಪ್ರದೀಪ್ ಅವರನ್ನು ಉಜಿರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಸಾಗಿಸುವ ಮಧ್ಯ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮನೆಗೆ ಆಧಾರಸ್ತಂಭವಾಗಿದ್ದ ಪ್ರದೀಪ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.