ಬಂಟ್ವಾಳ: ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ ಮತ್ತಿತರರು ಇದ್ದಾರೆ.

ಬಂಟ್ವಾಳ ಸುಮಾರು ೬೦ ವರ್ಷಗಳ ಹಿನ್ನೆಲೆ ಹೊಂದಿರುವ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ಕೊರತೆ ನಿವಾರಣೆ ಜೊತೆಗೆ ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ನೇತೃತ್ವದಲ್ಲಿ ವಿವಿಧ ಮೂಲಭೂತ ಸೌಕರ್ಯ ಸಹಿತ ಗುಣಮಟ್ಟದ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆ ಹಾಗೂ ಶಿಕ್ಷಣಕ್ಕೆ ಹೈಟೆಕ್ ಸ್ಪರ್ಶ ನೀಡುವ ಅಗತ್ಯವಿದೆ ಎಂದು ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಿ.ಸಪಲ್ಯ ಹೇಳಿದ್ದಾರೆ.

ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾನುವಾರ ಸಂಜೆ ನಡೆದ ಮೂರನೇ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಸಾವಿರಾರು ಮಂದಿ ಹಳೆ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ವಿವಿಧ ಸಂಘ ಸಂಸ್ಥೆಗಳಿAದ ದೇಣಿಗೆ ಮತ್ತು ಕಂಪೆನಿ ಸಿ ಎಸ್ ಆರ್ ಫಂಡ್ ಪಡೆಯಲು ಪಾರದರ್ಶಕವಾಗಿ ಚಾರಿಟೇಬಲ್ ಟ್ರಸ್ಟ್ ರಚನೆ ಅಗತ್ಯವಿದೆ ಎಂದರು. ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಹೆಚ್ಚುವರಿ ಶಿಕ್ಷಕರ ನಿಯೋಜನೆ, ಮೂಲಭೂತ ಸೌಕರ್ಯ ಸಹಿತ ಪಠ್ಯೇತರ ಚಟುವಟಿಕೆಗೆ ಒತ್ತು, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಿ ಸ್ಪರ್ಧಾತ್ಮಕ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಾಜೇಶ ಶೆಟ್ಟಿ ಸೀತಾಳ ಮತ್ತು ರೂಪಾ ಆರ್.ಶೆಟ್ಟಿ ದಂಪತಿ, ಪದ್ಮನಾಭ ಕಲ್ಲಡ್ಕ, ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಚಂದ್ರಶೇಖರ ಗೌಡ ಕಾರಂಬಡೆ, ಹಿರಿಯ ಕೃಷಿಕ ವಸಂತ ಗೌಡ ಮುದ್ದಾಜೆ, ಮುಂಬೈ ವಿಜ್ಞಾನಿ ರಿತಿಕಾ ಶ್ರೀನಿವಾಸ್ ಮತ್ತಿತರರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ಕುಮಾರ್ ಬೆಟ್ಟು, ಸಂತೋಷ್ ಗೌಡ ಗೋಳಿತ್ತೊಟ್ಟು, ಮಾಜಿ ಉಪಾಧ್ಯಕ್ಷೆ ಪುಷ್ಪಲತಾ, ಮಾಜಿ ಸದಸ್ಯ ರಾಘವ ಅಮೀನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್, ಉಪನ್ಯಾಸಕಿ ರೂಪಾ ಹರೀಶ್, ಶಿಕ್ಷಕಿ ಜಾನೆಟ್ ಕೊನ್ಸೆಸೊ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಗೌಡ ಮತ್ತಿತರರು ಇದ್ದರು.

ಹಳೆ ವಿದ್ಯಾರ್ಥಿ ಮಧುಕರ ಬಂಗೇರ ಸ್ವಾಗತಿಸಿ, ಮುಖ್ಯಶಿಕ್ಷಕ ಜಯರಾಮ ಪಡ್ರೆ ವಂದಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *