ಕಡಬ: ದಲಿತ ಮಹಿಳೆಯ ಮಾನಭಂಗ ಯತ್ನ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು : ರಾಕೇಶ್ ರೈ ಕೆಡೆಂಜಿ
ಕಡಬ: ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಇಬ್ಬರು ದಲಿತ ಮಹಿಳೆಯ ಮಾನಭಂಗ ಯತ್ನ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ವಿರೋಧ ಪಕ್ಷಗಳು ಆರೋಪಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು.
ಕಡಬದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಒಂಟಿ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದುದನ್ನು ಗಮನಿಸಿದ್ದು, ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಹಿಳೆ ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದನ್ನು ಗಮನಿಸಿದ ಮಹಿಳೆಯೊಬ್ಬರು ಬಂದು ಅವರೂ ಕೂಡ ಬೊಬ್ಬೆ ಹೊಡೆದಾಗ ದುಷ್ಕರ್ಮಿಗಳಿಬ್ಬರು ತಾವು ಬಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಊರವರು ಬೆನ್ನಟ್ಟಿದಾಗ ಆರೋಪಿಗಳ ಕಾರು 2 ಬೈಕ್ ಮತ್ತು 1 ಜೀಪಿಗೆ ಡಿಕ್ಕಿ ಹೊಡೆದು ಕಾರು ಕಾಣಿಯೂರು ಬಳಿ ಪಲ್ಟಿಯಾಗಿತ್ತು. ಆದರೆ ಕಾಂಗ್ರೇಸ್ ಮತ್ತು ಎಸ್.ಡಿ.ಪಿ.ಐ ಸೇರಿದಂತೆ ಕೆಲವು ಸಂಘಟನೆಗಳು ಈ ಘಟನೆಯನ್ನು ರಾಜಕೀಯಗೊಳಿಸಿ ದಲಿತ ಮಹಿಳೆಯ ಅತ್ಯಾಚಾರ ಯತ್ನವನ್ನು ತಿರುಚಿ ದುಷ್ಕರ್ಮಿಗಳನ್ನು ಬೆಂಬಲಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.