ಮಣಿಹಳ್ಳ: ಕಾರು- ಸರ್ಕಾರಿ ಬಸ್ ಡಿಕ್ಕಿ ಮೆಸ್ಕಾಂ ಎಂಜಿನಿಯರ್ ಸಾವು
ಬಂಟ್ವಾಳ: ಇಲ್ಲಿನ ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಮಣಿಹಳ್ಳ ಎಂಬಲ್ಲಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ವಿಟ್ಲ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಜೋಷಿ (೪೩) ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಅ.21ರಂದು ಶುಕ್ರವಾರ ನಡೆದಿದೆ.
ಪ್ರವೀಣ ಜೋಷಿ ಅವರು ಶುಕ್ರವಾರ ಬೆಳಿಗ್ಗೆ ಸುಮಾರು ೧೧ ಗಂಟೆಗೆ ವಗ್ಗ ಸಮೀಪದ ಮಧ್ವ ಮನೆಯಿಂದ ಬಂಟ್ವಾಳ ಕಡೆಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದೇ ವೇಳೆ ಇವರ ಕಾರಿಗೆ ಹಿಂಬದಿಯಿಂದ ಬಂದ ಸರ್ಕಾರಿ ಬಸ್ ಕೂಡಾ ಡಿಕ್ಕಿಯಾಗಿದೆ. ನುಜ್ಜುಗುಜ್ಜಾದ ಕಾರಿನ ಒಳಗೆ ಗಂಭೀರ ಗಾಯಗೊಂಡು ಸಿಲುಕಿದ್ದ ಗಾಯಾಳುವನ್ನು ಸ್ಥಳೀಯರು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರಾದರೂ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದರು.
ಈ ಅಪಘಾತದಿಂದ ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದಂತೆಯೇ ಸಂಚಾರಿ ಠಾಣೆ ಪೊಲೀಸರು ಬಂದು ವಿಜಯಲಕ್ಷ್ಮೀ ಕ್ರೇನ್ ಮೂಲಕ ನುಜ್ಜುಗುಜ್ಜಾದ ಕಾರು ಮತ್ತು ಬಸ್ ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಬಂಟ್ವಾಳ ಮೆಸ್ಕಾಂ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪ್ರವೀಣ್ ಜೋಷಿ ಅವರು ಕಳೆದ ಐದು ವರ್ಷಗಳ ಹಿಂದೆಯಷ್ಟೇ ವಿಟ್ಲಕ್ಕೆ ವರ್ಗಾವಣೆಗೊಂಡಿದ್ದರು. ಮೃತರಿಗೆ ಪತ್ನಿ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಸಹಿತ ಪುತ್ರ ಮತ್ತು ಪುತ್ರಿ ಇದ್ದಾರೆ.