ಮಂಗಳೂರು : ಯಶಸ್ವಿಯಾಗಿ ನಡೆದ ಮಿಲಾಗ್ರಿಸ್ ಪಿ.ಯು. ಕಾಲೇಜು ಎನ್.ಎಸ್.ಎಸ್. ಶಿಬಿರ
ಮಂಗಳೂರು: ಹಂಪನಕಟ್ಟೆಯ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಶಿಬಿರವು ನಗರದ ಕಾಸ್ಸಿಯಾ ಸಂತ ರೀಟಾ ವಿದ್ಯಾ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಯಿತು.



ಶಿಬಿರವನ್ನು ಮಹಾನಗರ ಪಾಲಿಕೆ ಸದಸ್ಯೆ ಭಾನುಮತಿ ಅವರು ಉದ್ಘಾಟಿಸಿ ಮಾತನಾಡಿ, ಎನ್.ಎಸ್.ಎಸ್. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ , ಶಿಸ್ತು, ಸಮಯ ಪ್ರಜ್ನೆ , ಸಾಮರಸ್ಯದ ಗುಣಗಳನ್ನು ಬೆಳೆಸಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.ಸಂತ ರೀಟಾ ವಿದ್ಯಾಸಂಸ್ಥೆಯ ಸಂಚಾಲಕ ವಂದನೀಯ ಎರಿಕ್ ಕ್ರಾಸ್ತಾ ಅವರು ಶುಭಕೋರಿ ಮಾತನಾಡಿ ಎನ್.ಎಸ್.ಎಸ್. ಶಿಬಿರವು ಶ್ರಮದ ಜೊತೆಗೆ ಜೀವನ ಮೌಲ್ಯವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲ ವಂದನೀಯ ಮೈಕಲ್ ಸಾಂತುಮಾರ್ ಅವರು ಮಾತನಾಡಿ ಎನ್.ಎಸ್.ಎಸ್. ನ ಧ್ಯೇಯ ಉದ್ದೇಶಗಳ ಬಗ್ಗೆ ವಿವರ ನೀಡಿದರು. ಕಾಸ್ಸಿಯಾ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎವರೆಸ್ಟ್ ಕ್ರಾಸ್ತಾ ಮತ್ತು ಜೀನ್ ಪಿಂಟೋ ಉಪಸ್ಥಿತರಿದ್ದರು.



ಎನ್.ಎಸ್.ಎಸ್. ಯೋಜನಾಧಿಕಾರಿ ಕಿರಣ್ ಡಿಸೋಜ ಸ್ವಾಗತಿಸಿದರು, ಯಶೋಧ ಮತ್ತು ಸಾನ್ಯಾ ಕಾರ್ಯಕ್ರಮ ನಿರೂಪಿಸಿದರು, ಎನ್. ಎಸ್.ಎಸ್. ನಾಯಕ ಪವನ್ ಶೆಟ್ಟಿ ವಂದಿಸಿದರು.ಶಿಬಿರದ ಅಂಗವಾಗಿ ಎನ್.ಎಸ್.ವಿದ್ಯಾರ್ಥಿಗಳು ಕಾಸ್ಸಿಯಾ ಪೇಟೆಯಲ್ಲಿ ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ ನಡೆಸಿ ಬೀದಿ ಬದಿಯ ಪ್ಲಾಸ್ಟಿಕ್ ಗಳನ್ನು ಸ್ವಚ್ಛ ಮಾಡಿದರು.ಶಿಬಿರದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ `ಸಂವಹನ ಮತ್ತು ಸಂದರ್ಶನ ಕಲೆ’ ಬಗೆ ಶಿಕ್ಷಕ ಐ.ಸಿ.ಕೋಟ್ಯಾನ್, ರಸ್ತೆ ಅಪಘಾತ ಮತ್ತು ಕಾನೂನು ಮಾಹಿತಿ ಬಗ್ಗೆ ಚೀಫ್ ಆಫ್ ಟ್ರಾಫಿಕ್ ವಾರ್ಡನ್ ಸುರೇಶ್‌ನಾಥ್, ಬಂಡವಾಳ ಹೂಡಿಕೆ ಬಗ್ಗೆ ನಿತಿನ್ ತೇಜ್‌ಪಾಲ್ , ನನ್ನ ಯಶಸ್ಸು ಸಾಧ್ಯವೇ ಎಂಬ ವಿಷಯದ ಬಗ್ಗೆ ಕೇವಿನ್ ಫೆರ್ನಾಂಡಿಸ್ , ಪತ್ರಿಕೋದ್ಯಮದ ಅಗುಹೋಗುಗಳ ಬಗ್ಗೆ ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾಹಿತಿ ನೀಡಿದರು.


ಸಮಾರೋಪ ಸಮಾರಂಭದಲ್ಲಿ ಮಿಲಾಗ್ರಿಸ್ ಹೈಸ್ಕೂಲ್ ಪ್ರಾಂಶುಪಾಲ ಸ್ಟಾನಿ ಬರೆಟ್ಟೊ ,ಕಾಸ್ಸಿಯಾ ಸಂಸ್ಥೆಯ ಸಂಚಾಲಕ ಎರಿಕ್ ಕ್ರಾಸ್ತಾ , ಮಹಾನಗರಪಾಲಿಕೆ ಸದಸ್ಯೆ ಭಾನುಮತಿ, ಬಿ.ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.