ಬಿ.ಸಿ.ರೋಡು: ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ, ಕೈಕುಂಜೆಗೆ ಶಾಖೆ ಸ್ಥಳಾಂತರ
ಬಂಟ್ವಾಳ: ತಾಲ್ಲೂಕಿನ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಬುಧವಾರ ಕೈಕುಂಜೆಗೆ ಸ್ಥಳಾಂತರಗೊಂಡ ಶಾಖೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಉರ್ಬಾನ್ ಪಿಂಟೋ ಮಾತನಾಡಿದರು.
ಬಂಟ್ವಾಳ ಇಲ್ಲಿನ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘವು ಒಟ್ಟು ೪ ಶಾಖೆಗಳನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ ಒಟ್ಟು ರೂ ೧೬ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ೪.೨೫ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಉರ್ಬಾನ್ ಪಿಂಟೋ ಹೇಳಿದ್ದಾರೆ.
ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಬುಧವಾರ ಕೈಕುಂಜೆಗೆ ಸ್ಥಳಾಂತರಗೊಂಡ ಶಾಖೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಮಂಗಳೂರಿನಲ್ಲಿ ಪ್ರಧಾನ ಕಚೇರಿ ಸಹಿತ ಸುರತ್ಕಲ್, ಮೂಡುಬಿದ್ರೆ, ಬಿ.ಸಿ.ರೋಡು ಶಾಖೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಮೆಸ್ಕಾಂನ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ ಪೈ ಸ್ಥಳಾಂತರಗೊಂಡ ಶಾಖೆ ಉದ್ಘಾಟಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕುಶಲ ಪೂಜಾರಿ, ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಜೆ. ಶುಭ ಹಾರೈಸಿದರು.
ಪುರಸಭೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ವಿದ್ಯುತ್ ಗುತ್ತಿಗೆದಾರರ ಸಂಘದ ಉಪ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಸಿಇಒ ರಾಜೇಶ್ ಎಂ.ಜೆ., ಠೇವಣಿದಾರ ಶ್ರೀಧರ ರಾವ್, ಪ್ರಾಮಾಣಿಕ ಸಾಲ ಮರುಪಾವತಿದಾರ ಸುಂದರ ಪೂಜಾರಿ ಮಾಣಿ, ಶಾಖಾ ವ್ಯವಸ್ಥಾಪಕ ಜಯರಾಮ್ ಕೆ., ಸಂಘದ ನಿರ್ದೇಶಕರು ಇದ್ದರು.
ಸಂಘದ ಉಪಾಧ್ಯಕ್ಷ ಸದಾಶಿವ ಬಂಗೇರ ಸ್ವಾಗತಿಸಿ, ನಿರ್ದೇಶಕ ರವಿಪ್ರಸಾದ್ ಶೆಟ್ಟಿ ವಂದಿಸಿದರು.