ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ
ನವದೆಹಲಿ: ಆಡಳಿತರೂಢ ದೆಹಲಿ ಸರ್ಕಾರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ (Vinai Kumar Saxena) ಆಂತರಿಕ ಯುದ್ಧ ಮುಂದುವರಿಸಿದ್ದಾರೆ. ದೆಹಲಿ ಜಲ ಮಂಡಳಿಯಲ್ಲಿ (Jal Board) ನಡೆದಿರುವ 20 ಕೋಟಿ ರೂ. ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ದೆಹಲಿ ಜಲ ಬೋರ್ಡ್‍ನಲ್ಲಿ ಅಧಿಕಾರಿಗಳ ಸಹಾಯದಿಂದ ಡಿಸಿಎಂ ಮನೀಷ್ ಸಿಸೋಡಿಯಾ (Manish Sisodia) ಅಕ್ರಮ ನಡೆಸಿದ್ದು ಅಧಿಕಾರಿಗಳ ವಿರುದ್ಧ ಎಫ್‍ಐಆರ್ (FIR) ದಾಖಲಿಸಿ ತನಿಖೆ ನಡೆಸಿ ಹದಿನೈದು ದಿನಗಳಲ್ಲಿ ಕ್ರಮದ ಬಗ್ಗೆ ವರದಿ ನೀಡುವಂತೆ ಅವರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷ ಮತ್ತು ಎಎಪಿ (AAP) ಶಾಸಕ ಸೌರಭ್ ಭಾರದ್ವಾಜ್, ಎಲ್ಲಾ ರೀತಿಯ ತನಿಖೆಗಳನ್ನು ನಾವು ಸ್ವಾಗತಿಸುತ್ತೇವೆ. ಮನೀಶ್ ಸಿಸೋಡಿಯಾ ಕೂಡ ಈ ರೀತಿಯ ತನಿಖೆಗೆ ಶಿಫಾರಸು ಮಾಡಿದ್ದರು ಎಂದು ಹೇಳಿದ್ದಾರೆ. ದೆಹಲಿ ಜಲ ಮಂಡಳಿ ಗ್ರಾಹಕರಿಂದ 20 ಕೋಟಿ ರೂಪಾಯಿಯಷ್ಟು ನೀರಿನ ಬಿಲ್ ಸಂಗ್ರಹಿಸಿದೆ, ಈ ಹಣವನ್ನು ಹಲವಾರು ವರ್ಷಗಳಿಂದ ಜಲ ಮಂಡಳಿ ಬ್ಯಾಂಕ್ ಖಾತೆಗೆ ಬದಲಾಗಿ ಖಾಸಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನೀರಿನ ಬಿಲ್ ಸಂಗ್ರಹಿಸಲು ಕಾರ್ಪೊರೇಷನ್ ಬ್ಯಾಂಕ್‍ಗೆ ಅನುಮತಿ ನೀಡಲಾಗಿತ್ತು.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಲ ಮಂಡಳಿ ಅಧ್ಯಕ್ಷರಾಗಿದ್ದಾಗ 2019 ಅಕ್ಟೋಬರ್ 10ರ ಬಳಿಕ ಬ್ಯಾಂಕ್‍ನ ಒಪ್ಪಂದವನ್ನು ವಿಸ್ತರಿಸುವಾಗ ಈ ವ್ಯತ್ಯಾಸ ಮತ್ತು ಅಕ್ರಮಗಳು ಗಮನಕ್ಕೆ ಬಂದಿದ್ದು, ಅದಾಗ್ಯೂ ಕೇಜ್ರಿವಾಲ್ ನೇತೃತ್ವದ ಮಂಡಳಿಯು ಕಾರ್ಪೊರೇಷನ್ ಬ್ಯಾಂಕ್‍ನ ಒಪ್ಪಂದವನ್ನು ಮತ್ತಷ್ಟು ವಿಸ್ತರಿಸಿತ್ತು. ಹೀಗಾಗಿ ಸರ್ಕಾರವು ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಮಾಡಲಾಗಿದೆ.