ಸಜಿಪಮುನ್ನೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ, ರೂ ೧೦.೬೫ ಲಕ್ಷ ಲಾಭ, ಶೇ ೨೫ ಡಿವಿಡೆಂಡ್ ವಿತರಣೆ
ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಬೊಳ್ಳಾಯಿ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಇದ್ದಾರೆ.
ಬಂಟ್ವಾಳ ಸಾಲಿನಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು ಒಟ್ಟು ರೂ ೮೫ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ ೧೦.೬೫ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಹೇಳಿದ್ದಾರೆ.
ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಬೊಳ್ಳಾಯಿ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಒಟ್ಟು ೯ ಶಾಖೆ ಹೊಂದಿದ್ದು, ಮುಂದಿನ ವರ್ಷದಲ್ಲಿ ಮತ್ತೆ ೫ ಶಾಖೆ ತೆರೆಯುವ ಮೂಲಕ ಮುಂಬರುವ ೫ ವರ್ಷಗಳಲ್ಲಿ ಒಟ್ಟು ೨೫ ಶಾಖೆ ತೆರೆದು ೧೦೦ ಮಂದಿ ಮಹಿಳೆಯರಿಗೆ ಉದ್ಯೋಗ ನೀಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸ್ಥಗಿತಗೊಂಡ ಕೆಲವೊಂದು ಮೂರ್ತೆದಾರರ ಸಹಕಾರಿ ಸಂಘಗಳ ವಿಲೀನ, ಸಂಘಕ್ಕೆ ಆಡಳಿತ ಕಚೇರಿ, ಸಭಾಂಗಣ, ತರಬೇತಿ ಕೇಂದ್ರ ನಿರ್ಮಾಣ, ಮಹಿಳೆಯರಿಗೆ ತ್ವರಿತ ಸಾಲ, ವಿದ್ಯಾರ್ಥಿ ವೇತನ ವಿತರಣೆ, ಅನಾರೋಗ್ಯಪೀಡಿತರಿಗೆ ನೆರವು ನೀಡಲು ಸಂಘ ಬದ್ಧವಾಗಿದೆ ಎಂದರು.
ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಾ. ರಾಜರಾಮ್ ಶುಭ ಹಾರೈಸಿದರು. ಇದೇ ವೇಳೆ ಹಿರಿಯ ಮೂರ್ತೆದಾರ ಡೊಂಬಯ್ಯ ಪೂಜಾರಿ, ರಾಘವ ಪೂಜಾರಿ, ಮಾರ್ನಬೈಲು ಶಾಖಾಧಿಕಾರಿ ನಿಶ್ಮಿತಾ ಕೆ., ನಿತ್ಯನಿಧಿ ಸಂಗ್ರಾಹಕ ಜೆ.ಎಫ್.ನಿಝಾರ್ ಇವರನ್ನು ಗೌರವಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ೬೬ ಮಂದಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠಲ ಬೆಳ್ಚಡ, ಅಶೋಕ್, ಸುಜಾತ ಮೋಹನದಾಸ, ವಾಣಿ ವಸಂತ್ ಇದ್ದರು. ಸಿಇಒ ಮಮತಾ ಜಿ. ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿ, ಜಯಶಂಕರ ಕಾನ್ಸಲೆ ವಂದಿಸಿದರು, ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.