ಸಿದ್ಧಕಟ್ಟೆ: ಅ.೨ರಿಂದ ೩ರತನಕ ದಸರಾ ಕಾರ್ಯಕ್ರಮ ಆಮಂತ್ರಣ ಪತ್ರ ಬಿಡುಗಡೆ, ಶಾರದೆಗೆ ‘ಬೆಳ್ಳಿ ವೀಣೆ ಸಮರ್ಪಣೆ’
ಬಂಟ್ವಾಳ : ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ೪ನೇ ವರ್ಷದ ದಸರಾ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು.
ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ಕೇಂದ್ರ ಮೈದಾನದಲ್ಲಿ ಕಳೆದ ೩ ವರ್ಷಗಳ ಹಿಂದೆ ಆರಂಭಗೊಂಡ ‘ಸಿದ್ಧಕಟ್ಟೆ ದಸರಾ’ ಕಾರ್ಯಕ್ರಮ ಅ.೨ರಿಂದ ೩ರತನಕ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆಯಲ್ಲಿ ೪ನೇ ವರ್ಷದ ‘ಸಿದ್ಧಕಟ್ಟೆ ದಸರಾ’ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅ.೨ ರಿಂದ ೩ರ ತನಕ ಎರಡು ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಜನಾ ಸೇವೆ, ಸಭಾ ಕಾರ್ಯಕ್ರಮ, ಭಕ್ತಿಗಾನ ರಸಮಂಜರಿ, ಸಾರ್ವಜನಿಕ ಅನ್ನಸಂತರ್ಪಣೆ, ತುಳು ನಾಟಕ, ಚೆಂಡೆ ಪ್ರದರ್ಶನ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ರಕ್ತರಾತ್ರಿ’ ಯಕ್ಷಗಾನ ಪ್ರದರ್ಶನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಶಾರದೆಗೆ ‘ಬೆಳ್ಳಿ ವೀಣೆ ಸಮರ್ಪಣೆ’ ನಡೆಯಲಿದೆ ಎಂದು ಅವರು ತಿಳಿಸಿದರು.
ಸಮಿತಿ ಅಧ್ಯಕ್ಷ ಕೆ.ರಮೇಶ ನಾಯಕ್, ಸಂಚಾಲಕ ಜಗದೀಶ ಕೊಯಿಲ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಅಂಗರಕುಮೇರು, ಕೋಶಾಧಿಕಾರಿ ಸೀತಾರಾಮ ಶಾಂತಿ, ಲೆಕ್ಕ ಪರಿಶೋಧಕ ಗಣೇಶ ನಾಯಕ್, ಮಹಿಳಾ ಸಮಿತಿ ಅಧ್ಯಕ್ಷೆ ಅನಿತಾ ಶಿವಾನಂದ ರೈ, ಕಾರ್ಯದರ್ಶಿ ಪ್ರಮೀಳ ಲೋಕೇಶ್ ಮತ್ತಿತರರು ಇದ್ದರು.