ನೇರಳಕಟ್ಟೆ: ೩೦ರಂದು ಅಕ್ರಮ ಚಟುವಟಿಕೆ ವಿರುದ್ಧ ‘ಉಲಮಾ ಉಮರಾ ಸಮ್ಮೇಳನ’
ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಮದ್ಯ ಸೇವನೆ ಮತ್ತು ಗಾಂಜಾ ಮಾರಾಟ ದಂಧೆ ಮತ್ತಿತರ ಅಕ್ರಮ ಚಟುವಟಿಕೆಗಳ ವಿರುದ್ಧ ಜನ ಜಾಗೃತಿ ಮೂಡಿಸುವ ಸಲುವಾಗಿ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕರ್ನಾಟಕ ಮುಶಾವರ ವತಿಯಿಂದ ಇದೇ ೩೦ರಂದು ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ‘ಉಲಮಾ ಉಮರಾ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಹೇಳಿದರು.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಿಗ್ಗೆ ಗಂಟೆ ೧೦ರಿಂದ ಮಧ್ಯಾಹ್ನ ೨ ಗಂಟೆತನಕ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವ ವಹಿವುವರು ಎಂದರು.
ಕಾಲೇಜು ವಿದ್ಯಾರ್ಥಿಗಳು ಸಹಿತ ಯುವಜನತೆ ದಾರಿ ತಪ್ಪಿದಾಗ ಸಮಾಜದಲ್ಲಿ ಪದೇ ಪದೇ ಗಲಭೆ, ಅಶಾಂತಿ, ಅಹಿತಕರ ಘಟನೆ ಮರುಕಳಿಸುತ್ತದೆ. ಇವೆಲ್ಲವನ್ನೂ ನಿಯಂತ್ರಣಕ್ಕೆ ತರಲು ಎಲ್ಲರೂ ಕೈ ಜೋಡಿಸಿ ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಕೆ.ಎಂ.ಉಸ್ಮಾನ್ ಫೈಝಿ ತೋಡಾರ್, ಪ್ರಮುಖರಾದ ಅಬೂಬಕ್ಕರ್ ಸಿದ್ದಿಕ್ ದಾರಿಮಿ ಕಡಬ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ನಂದಾವರ ಇದ್ದರು.