ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಶಾಲೆಯ ಮುಖ್ಯೋಪಾಧ್ಯಾಯಿನಿಗೆ ಕುಶಲ ಎ. ಅವರಿಗೆ ಬೀಳ್ಕೊಡುಗೆ
ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ಸಲ್ಲಿಸಿ, ಸೇವಾನಿವೃತ್ತಿ ಹೊಂದಿದ ಕುಶಲ ಎ. ಅವರಿಗೆ ಬೀಳ್ಕೊಡುಗೆ ಸಮಾರಂಭ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವೃಂದದ ವತಿಯಿಂದ ನಡೆಯಿತು.

ಈ ಸಂದರ್ಭ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ನಿವೃತ್ತಿ ಹೊಂದಿದ ಸರ್ಕಾರಿ ನೌಕರರು ಮುಂದೆ ಪಿಂಚಣಿ ಕುರಿತು ಸಮಸ್ಯೆಗಳನ್ನು ಅನುಭವಿಸದಂತೆ ಸಂಘ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗುವುದು ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಪಿ.ಎಸ್, ತಾಲೂಕು ಅಧ್ಯಕ್ಷ ಜಯರಾಮ ಎಂ, ತಾಲೂಕು ಕಾರ್ಯದರ್ಶಿ ಯತೀಶ್, ಕೋಶಾಧಿಕಾರಿ ಸುನೀಲ್ ಸಿಕ್ವೇರ, ಪದಾಧಿಕಾರಿಗಳಾದ ಪುಟ್ಟರಂಗನಾಥ, ಇಸ್ಮಾಯಿಲ್, ಮಮತಾ ಶೆಟ್ಟಿ, ಶಶಿ, ಸುನೀತಾ, ಸುಧಾಮ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಸದಸ್ಯ ಗಿರೀಶ್ ಪೈ, ಪ್ರೌಢಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೇಶವ ದೈಪಲ, ಪ್ರೌಢಶಾಲಾ ಶಿಕ್ಷಕರಾದ ರಮೇಶ್, ಶಾಲಾ ಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮಮತಾ ಈ ಸಂದರ್ಭ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ವೇಳೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲೆಗೆ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು.