ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ
ನವದೆಹಲಿ: ಸಾಕುನಾಯಿಯನ್ನು ಹೊಂದಿದ್ದ ಕುಟುಂಬದವರ ವಿರುದ್ಧ ರೋಚಿಗೆದ್ದ ನೆರೆಮನೆಯವರು ದೊಣ್ಣೆ, ಕಬ್ಬಿಣದ ರಾಡ್‍ನಿಂದ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ರಸ್ತೆಯಲ್ಲಿ ಸಾಕುನಾಯಿ ತಿರುಗಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ದಾಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಗಳ ನಡೆದಿತ್ತು. ಈ ವೇಳೆ ಸಾಕುನಾಯಿ ಹೊಂದಿದ್ದ ವಿನೋದ್ ಕುಮಾರ್, ಅವರ ಪತ್ನಿ ಮತ್ತು ಮಗಳ ಮೇಲೆ ನೆರೆಮನೆಯ ಜಿತೇಂದರ್ ಪಾಂಡೆ ಮತ್ತು ಅವರ ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ(ದ್ವಾರಕಾ) ಎಂ.ಹರ್ಷವರ್ಧನ್ ತಿಳಿಸಿದ್ದಾರೆ.
ನಡೆದಿದ್ದೇನು?
ಜಿತೇಂದರ್ ಪಾಂಡೆ ಚೆನ್ನಾಗಿ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ. ಈ ವೇಳೆ ವಿನೋದ್ ಕುಮಾರ್ ತನ್ನ ನಾಯಿಯೊಂದಿಗೆ ವಾಕಿಂಗ್‌ಗೆ ಹೋಗುತ್ತಿದ್ದರು. ಆಗ ಪಾಂಡೆಯನ್ನು ವಿನೋದ್ ಅವರ ನಾಯಿ ಕಚ್ಚಿದೆ ಎಂದು ನಾಯಿಯನ್ನು ಹೊಡೆಯಲು ಪ್ರಯತ್ನಿಸಿದ್ದಾನೆ. ನಂತರ, ಪಾಂಡೆ ತನ್ನ ಮನೆಯಿಂದ ಕೆಲವು ವ್ಯಕ್ತಿಗಳನ್ನು ಕರೆದಿದ್ದು, ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಾನೆ.
ದೂರು ದಾಖಲು
ಈ ಹಿನ್ನೆಲೆ ವಿನೋದ್ ಕುಮಾರ್ ಪೊಲೀಸರಿಗೆ ಜಿತೇಂದರ್ ಪಾಂಡೆ ಮತ್ತು ಆತನ ಸಂಬಂಧಿಕರ ವಿರುದ್ಧ ದೂರು ಕೊಟ್ಟಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಈ ದೂರಿನ ಪ್ರಕಾರ, ಹಲ್ಲೆ ವೇಳೆ ಆರೋಪಿಗಳು ಸಂತ್ರಸ್ತರ ಮೇಲೆ ಬಿದಿರಿನ ದೊಣ್ಣೆ ಮತ್ತು ಕಬ್ಬಿಣದ ರಾಡ್‍ಗಳನ್ನು ಬಳಸಿ ಹಲ್ಲೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ಬರು ಅರೆಸ್ಟ್
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೆಯ ಸಂಬಂಧಿಕರಾದ ನವೀನ್ ಮತ್ತು ಸನೋಜ್ ಕುಮಾರ್ ಇಬ್ಬರನ್ನು ಬಂಧಿಸಲಾಗಿದೆ. ಇತರ ಆರೋಪಿಗಳು ನಾಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.