ಎಡನೀರಲ್ಲಿ ಹೊರನಾಡ ಕನ್ನಡ ಸಿರಿ ಉತ್ಸವ ಸಂಪನ್ನ
ಬದಿಯಡ್ಕ: ಕಾಸರಗೋಡು ಭೌಗೋಳಿಕವಾಗಿ ಕೇರಳದ ಭಾಗವಾಗಿದ್ದರೂ ಭಾವನಾತ್ಮಕವಾಗಿ ಈಗಲೂ ಕನ್ನಡತನವನ್ನು ಅಂತರಾಳದಲ್ಲಿ ಹುದುಗಿಸಿಕೊಂಡಿದೆ. ಇಲ್ಲಿಯ ಆಚಾರ-ವಿಚಾರ, ಆಹಾರ-ವಿಹಾರ, ಎಚ್ಚರ ಮತ್ತು ನಿದ್ರೆಗಳೆಲ್ಲ ಕನ್ನಡದ ಶ್ರೀಮಂತಿಕೆಯದ್ದಾಗಿದೆ. ತಮ್ಮ ಹಕ್ಕುಗಳ ಸಂರಕ್ಷಣೆಗಾಗಿ ನಿರಂತರ ಹೋರಾಟದ ಬದುಕು ಸಾಗಿಸುತ್ತಿರುವ ಕಾಸರಗೋಡಿನ ಕನ್ನಡ ಸತ್ವವನ್ನು ಕಾಯ್ದುಕೊಳ್ಳುವಲ್ಲಿ ಕನ್ನಡ ಸಿರಿ ಉತ್ಸವದಂತಹ ಬಹುಮುಖಿ ಚಟುವಟಿಕೆಗಳು ಬೆಂಬಲ ನೀಡುತ್ತದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ರಾಷ್ಟ್ರೀಯ ಸಿರಿಗನ್ನಡ ಪರಿಷತ್ತು ಕಾಸರಗೋಡು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಸ್ವಾತಂತ್ತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾನುವಾರ ಅಪರಾಹ್ನ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹೊರನಾಡ ಕನ್ನಡ ಸಿರಿ ಉತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ನ್ಯಾಯವಾದಿ ಎಂ.ನಾರಾಯಣ ಭಟ್ ಮಾತನಾಡಿ, ಜಾಗತೀಕರಣ, ತಾಂತ್ರಿಕ ಯುಗದ ಈ ಕಾಲಘಟ್ಟದಲ್ಲಿ ಪ್ರಾದೇಶಿಕ ವೈವಿಧ್ಯಗಳನ್ನು ಸಂರಕ್ಷಿಸುವುದು ಸವಾಲಾಗುತ್ತಿದ್ದು, ಹೊಸ ತಲೆಮಾರಿಗೆ ಪರಂಪರೆಯನ್ನು ದಾಟಿಸುವ ಹೆಣಗಾಟದ ಮಧ್ಯೆ ಇಂತಹ ಸಾಂಸ್ಕೃತಿಕ ಉತ್ಸವಗಳು ಒಂದಷ್ಟು ಶಕ್ತಿ ನೀಡಬಲ್ಲದು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಿತ ರಕ್ಷಣೆ ಕರ್ನಾಟಕ ಸರ್ಕಾರದ ಕರ್ತವ್ಯವಾಗಿದ್ದು, ಬೆಂಬಲ ನೀಡುತ್ತಿದೆ. ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರ ಸಾಕಷ್ಟು ಆರ್ಥಿಕ ಬೆಂಬಲ ನೀಡುತ್ತಿದ್ದು, ಈ ನೆರವು ನಾಡಿನ ಮೂಲೆ ಮೂಲೆಗಳಿಗೂ ತಲಪುವಂತಾಗಬೇಕು ಎಂದು ತಿಳಿಸಿದರು. ಎಲ್ಲರೊಂದಿಗೂ ಮೃದು ಧೋರಣೆ ತಳೆಯುವ ಕನ್ನಡಿಗರು ತಮ್ಮ ಹಕ್ಕಿನ ಸಂರಕ್ಷಣೆಗೆ ಒಂದಷ್ಟು ಧ್ವನಿಯೆತ್ತಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾಡುನುಡಿಯ ರಕ್ಷಣೆಗೆ ತೊಡಗಿಸಿಕೊಳ್ಳುವುದು ಮುಖ್ಯ ಎಂದರು.
ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜೋಗಿಲ ಸಿದ್ದರಾಜು, ತುಳು ವರ್ಲ್ಡ್ ಸ್ಥಾಪಕ ಡಾ.ರಾಜೇಶ್ ಆಳ್ವ ಬದಿಯಡ್ಕ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ, ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಉದ್ಯಮಿ ರಾಮ ಪ್ರಸಾದ್ ಕಾಸರಗೋಡು, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್, ನಿವೃತ್ತ ತಹಶೀಲ್ದಾರ್ ಶಶಿಧರ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಯದೇವ ಖಂಡಿಗೆ, ರಾಂ ಪ್ರಸಾದ್ ಕಾಸರಗೋಡು, ಶಶಿಧರ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಷ್ಟ್ರೀಯ ಸಿರಿಗನ್ನಡ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ ಸ್ವಾಗತಿಸಿ, ವೆಂಕಟ್ ಬಟ್ ಎಡನೀರು ವಂದಿಸಿದರು. ಎಡನೀರು ಸ್ವಾಮೀಜೀಸ್ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿ ಜ್ಯೋತಿಲಕ್ಷ್ಮೀ ಹಾಗೂ ಸರ್ವಮಂಗಳ ಟೀಚರ್ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಇದರ ಅಧ್ಯಕ್ಷೆ ಡಾ.ವಾಣಿಶ್ರೀ ತಂಡದವರಿಂದ ಸಾಂಸ್ಕೃತಿಕ ವೈಭವ, ಜೋಗಿಲ ಸಿದ್ದರಾಜು ತಂಡದವರಿAದ ಸುಗಮ ಸಂಗೀತ, ವಿದುಷಿಃ ಉಷಾ ಬಸಪ್ಪ ಮತ್ತು ಬಳಗದವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ನಡೆಯಿತು.
ಬಾಕ್ಸ್: ಸಾಹಿತ್ತಿಕ, ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾತ್ರ ಗಡಿನಾಡಿನ ಕನ್ನಡ ಭಾಷೆ ಸಮಸ್ಕೃತಿ ಉಳಿಯಬಲ್ಲದು. ನಮ್ಮನ್ನು ನಾವು ಗೌರವಿಸಿ ನಮ್ಮ ಭಾಷೆ, ಸಂಸ್ಕೃತಿಯ ಬಗೆಗಿನ ನಮ್ಮ ಮೈಂಡ್ ಸೆಟ್ಟನ್ನು ಸ್ಪಷ್ಟ ಕೋನದಲ್ಲಿರಿಸಲು ಯಶಸ್ವಿಯಾಗಬೇಕು. ನಾವೇನನ್ನು ಪಡೆಯುತ್ತೇವೆಯೋ ಅದನ್ನೇ ನಾವು ಮರಳಿ ನೀಡಲು ಸಾಧ್ಯ. ಆದ್ದರಿಂದ ಉತ್ತಮ ಸಂಸ್ಕೃತಿ ಕಲಿತಾಗ ವ್ಯಕ್ತಿತ್ವ ಬೆಳೆಯುತ್ತದೆ. ಇದರಿಂದ ಧ್ಯೇಯದೆಡೆಗೆ ಸಾಗಲು ಸುಲಭವಾಗುತ್ತದೆ ಮುಖ್ಯ ಅತಿಥಿಗಳಾಗಿದ್ದ ಡಾ.ರಾಜೇಶ್ ಆಳ್ವ ಬದಿಯಡ್ಕ